ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕವನ್ನು ತರಾತುರಿಯಲ್ಲಿ ಮಧ್ಯರಾತ್ರಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಗೌರವ ತೋರಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಎಸಿ) ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯ ಪ್ರಕಟಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬರೆದುಕೊಂಡಿರುವ ರಾಹುಲ್, 'ಮುಂದಿನ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯ ಸಭೆಗೆ ನನ್ನ ಅಸಮ್ಮತಿ ಸೂಚಿಸಿ ಪ್ರಧಾನಿ ಹಾಗೂ ಗೃಹ ಸಚಿವರಿಗೆ ಸುದೀರ್ಘ ಪತ್ರ ಬರೆದಿದ್ದೇನೆ. ಅದರಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಕಾರ್ಯಾಂಗ ಹಸ್ತಕ್ಷೇಪ ಮಾಡಬಾರದು' ಎಂದು ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ.
'ಆದರೆ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದ್ದು, ಮೋದಿ ಸರ್ಕಾರವು ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಹಾಗೂ ಲಕ್ಷಾಂತರ ಮತದಾರರ ಕಳವಳವನ್ನು ಹೆಚ್ಚಿಸಿದೆ' ಎಂದು ಅವರು ಟೀಕಿಸಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ದೇಶದ ನಾಯಕರ ಆದರ್ಶಗಳನ್ನು ಎತ್ತಿ ಹಿಡಿಯುವುದು ನನ್ನ ಕರ್ತವ್ಯವಾಗಿದೆ. ನೂತನ ಸಿಇಸಿ ಆಯ್ಕೆಯನ್ನು ಮಧ್ಯರಾತ್ರಿ ತೆಗೆದುಕೊಳ್ಳುವ ಮೂಲಕ ಪ್ರಧಾನಿ ಹಾಗೂ ಗೃಹ ಸಚಿವರು ಅಗೌರವ ತೋರಿದ್ದಾರೆ. ಆಯುಕ್ತರ ನೇಮಕಕ್ಕೆ ರೂಪಿಸಲಾಗಿರುವ ಕಾಯ್ದೆಯನ್ನು ಪ್ರಶ್ನಿಸಿರುವ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. 48 ತಾಸಿಗೂ ಕಡಿಮೆ ಅವಧಿಯಲ್ಲಿ ವಿಚಾರಣೆ ನಡೆಯಲಿದೆ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.