ADVERTISEMENT

ಭಿನ್ನಮತೀಯರು ಅಹವಾಲಿನೊಂದಿಗೆ ಸೋನಿಯಾರನ್ನು ಭೇಟಿಯಾಗಬಹುದು: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 14:11 IST
Last Updated 3 ಸೆಪ್ಟೆಂಬರ್ 2020, 14:11 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಪಕ್ಷ ಸಂಘಟನೆ ಬಲಪಡಿಸುವುದು ಸೇರಿದಂತೆ ವಿವಿಧ ವಿಷಯ ಪ್ರಸ್ತಾಪಿಸಿ 23 ಮುಖಂಡರು ಪತ್ರ ಬರೆದ ನಂತರ ಕಾಂಗ್ರೆಸ್‌ನಲ್ಲಿ ಸ್ಫೋಟಗೊಂಡಿದ್ದ ಅಸಮಾಧಾನ ಇನ್ನೂ ಶಮನವಾದಂತೆ ಕಾಣುತ್ತಿಲ್ಲ.

ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿರುವವರು ತಮ್ಮ ಅಹವಾಲುಗಳೊಂದಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಪರಿಹಾರ ಕಂಡುಕೊಳ್ಳಬಹುದು ಎಂದು ಕಾಂಗ್ರೆಸ್‌ ಗುರುವಾರ ಹೇಳಿರುವುದು ಇದಕ್ಕೆ ಸಾಕ್ಷಿ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 23 ಜನ ಮುಖಂಡರು ಕೆಲವು ವಿಷಯ ಪ್ರಸ್ತಾಪಿಸಿ ಬರೆದಿದ್ದ ಪತ್ರ,ಇತ್ತೀಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ADVERTISEMENT

ಪತ್ರ ಬರೆದಿದ್ದ ಮುಖಂಡರ ಪೈಕಿ ಕಪಿಲ್‌ ಸಿಬಲ್‌, ಗುಲಾಂ ನಬಿ ಆಜಾದ್‌ ಹಾಗೂ ಆನಂದ್‌ ಶರ್ಮಾ ಅವರು, ತಾವು ಪ್ರಸ್ತಾಪಿಸಿದ್ದ ವಿಷಯಗಳಿಗೆ ಸಂಬಂಧಿಸಿ ಇನ್ನೂ ಪರಿಹಾರ ಸಿಕ್ಕಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ. ಹೀಗಾಗಿ, ಪಕ್ಷ ಇಂತಹ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.

‘ಎಲ್ಲ ಭಿನ್ನಮತೀಯ ನಾಯಕರು ಪ್ರಸ್ತಾಪಿಸಿದ್ದ ವಿಷಯಗಳನ್ನು ಸೋನಿಯಾ ಗಾಂಧಿ ಆಲಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಒಯ್ಯುವುದಾಗಿಯೂ ಭರವಸೆಯನ್ನೂ ನೀಡಿದ್ದಾರೆ. ಇಷ್ಟಾಗಿಯೂ, ಕೆಲವರು ಏನಾದರೂ ದೂರುಗಳನ್ನು ಹೊಂದಿದ್ದರೆ, ಅವರು ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಿ, ತಮ್ಮ ಅಹವಾಲು ಸಲ್ಲಿಸಬಹುದು‘ ಎಂದು ಪಕ್ಷದ ಮುಖ್ಯವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.