ADVERTISEMENT

‘ವಂದೇ ಮಾತರಂ’ ತಂಡರಿಸದಿದ್ದರೆ, ದೇಶವೂ ವಿಭಜನೆಯಾಗುತ್ತಿರಲಿಲ್ಲ: ಅಮಿತ್‌ ಶಾ

ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಗೃಹ ಸಚಿವ ಅಮಿತ್‌ ಶಾ

ಪಿಟಿಐ
Published 9 ಡಿಸೆಂಬರ್ 2025, 16:52 IST
Last Updated 9 ಡಿಸೆಂಬರ್ 2025, 16:52 IST
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು–ಪಿಟಿಐ ಚಿತ್ರ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು–ಪಿಟಿಐ ಚಿತ್ರ   

ನವದೆಹಲಿ: ‘ವಂದೇ ಮಾತರಂ ಗೀತೆಯನ್ನು ವಿಭಜಿಸಿದ್ದು, ದೇಶದ ಮೊದಲ ತುಷ್ಟೀಕರಣದ ಆರಂಭವಾಗಿದ್ದು, ದೇಶದ ವಿಭಜನೆಗೂ ಕಾರಣವಾಯಿತು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. 

ರಾಷ್ಟ್ರೀಯ ಗೀತೆಗೆ 150 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಆಯೋಜಿಸಿದ ಚರ್ಚೆಯನ್ನು ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯೊಂದಿಗೆ ಜೋಡಿಸಿದಕ್ಕಾಗಿ ವಿರೋಧ ಪಕ್ಷಗಳ ವಿರುದ್ಧ ಅವರು ಟೀಕಿಸಿದ್ದಾರೆ.

ಸದನದಲ್ಲಿ ಚರ್ಚೆಯನ್ನು ಆರಂಭಿಸಿದ ಅವರು, ‘ದೇಶದಲ್ಲಿ ಸಾಂಸ್ಕೃತಿಕ ಜಾಗೃತಿಗೊಳಿಸಿದ ಮಂತ್ರ ‘ವಂದೇ ಮಾತರಂ’ ಆಗಿದೆ. ಸ್ವಾತಂತ್ರ ಹೋರಾಟದ ಕಾಲದಲ್ಲಿದ್ದಂತೆಯೇ ಈಗಲೂ ಗೀತೆ ಪ್ರಸ್ತುತವಾಗಿದೆ. ದೇಶವನ್ನು ವಿಕಸಿತ ಭಾರತದ ಹಾದಿಯಲ್ಲಿ ಕೊಂಡೊಯ್ಯಲು ಗೀತೆಯೂ ಈಗಲೂ, ಮುಂದೆಯೂ ಕೂಡ ಪ್ರಸ್ತುತವಾಗಿದೆ ’ ಎಂದು ಶಾ ಹೇಳಿದ್ದಾರೆ.

ADVERTISEMENT

‘ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರು ‘ವಂದೇ ಮಾತರಂ’ ಹಾಡನ್ನು ವಿಭಜಿಸಿ, ಎರಡು ಚರಣಗಳಿಗೆ ಸೀಮಿತಗೊಳಿಸಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷವು ಹಾಡಿನ ಮೇಲೆ ಚರ್ಚೆಯನ್ನೇ ಪ್ರಶ್ನಿಸುತ್ತಿದೆ. 1937ರಲ್ಲಿ ವಂದೇ ಮಾತರಂ ಗೀತೆ 50 ವರ್ಷ ಪೂರ್ಣಗೊಳಿಸಿದ ವೇಳೆ ನೆಹರೂ ಅವರು ಎರಡು ಚರಣಗಳಿಗೆ ಸೀಮಿತಗೊಳಿಸಿದ್ದರು. ಗೀತೆಯ ಸುವರ್ಣ ಮಹೋತ್ಸವದ ವೇಳೆ ಅವರು ಗೌರವಿಸಿದ್ದು ಹೀಗೆ’ ಎಂದು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ವಂದೇ ಮಾತರಂ ವಿಭಜಿಸದಿದ್ದರೆ, ದೇಶವು ತುಂಡಾಗುತ್ತಿರಲಿಲ್ಲ. ಅಂದಿನಿಂದಲೇ ದೇಶದಲ್ಲಿ ತುಷ್ಟೀಕರಣ ರಾಜಕಾರಣ ಆರಂಭಗೊಂಡಿತು. ಕಾಂಗ್ರೆಸ್‌ ಒಪ್ಪಿಕೊಂಡರೂ, ಒಪ್ಪದಿದ್ದರೂ ಕೂಡ ಗೀತೆಯನ್ನು ವಿಭಜಿಸದಿದ್ದರೆ, ದೇಶವೂ ಕೂಡ ವಿಭಜನೆಯಾಗುತ್ತಿರಲಿಲ್ಲ ಎಂದು ನನ್ನಂತಹ ಅನೇಕರು ಭಾವಿಸುತ್ತಾರೆ’ ಎಂದು ಹೇಳಿದ್ದಾರೆ.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ: ‘ಗೀತೆ ಹಾಡಿನ ವಿಚಾರವನ್ನು ಚರ್ಚೆಗೆ ನಿಗದಿಪಡಿಸಿರುವುದು ನೈಜ ವಿಚಾರಗಳನ್ನು ಮರೆಮಾಚಲು ನಡೆಸಿದ ರಾಜಕೀಯ ತಂತ್ರವಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಸದಸ್ಯರು ಆರೋಪಿಸುತ್ತಿದ್ದಾರೆ. ನಾವು ಯಾವುದೇ ವಿಚಾರಗಳ ಬಗ್ಗೆ ಚರ್ಚಿಸಲು ಭಯಪಡುವುದಿಲ್ಲ. ನಾವು ಸಂಸತ್ತನ್ನು ಬಹಿಷ್ಕರಿಸುವುದಿಲ್ಲ. ಸಂಸತ್ತನ್ನು ಬಹಿಷ್ಕರಿಸಿ, ಕಾರ್ಯನಿರ್ವಹಿಸಲು ಬಿಡದಿದ್ದರೆ, ಎಲ್ಲ ವಿಚಾರಗಳು ಚರ್ಚೆ ನಡೆಯುತ್ತವೆ. ನಾವು ಯಾವುದಕ್ಕೂ ಹೆದರಲ್ಲ, ಯಾವ ವಿಚಾರದಲ್ಲಿಯೂ ಮುಚ್ಚುಮರೆಯಿಲ್ಲ. ನಾವು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಸಿದ್ಧವಿದ್ದೇವೆ’ ಎಂದು ಶಾ ತಿರುಗೇಟು ನೀಡಿದ್ದಾರೆ.

‘ಗೀತೆಯು ನೂರು ವರ್ಷದ ತುಂಬಿದ ವೇಳೆ ಇಡೀ ದೇಶವು ತುರ್ತು ಪರಿಸ್ಥಿತಿಯಲ್ಲಿತ್ತು’ ಎಂದು ಈ ವೇಳೆ ನೆನಪಿಸಿದ್ದಾರೆ.

ರಾಹುಲ್‌, ಪ್ರಿಯಾಂಕ ವಿರುದ್ಧ ಕಿಡಿ: ಸೋಮವಾರದಿಂದಲೇ ಈ ವಿಷಯ ಸಂಸತ್ತಿನಲ್ಲಿ ಚರ್ಚೆಯಾಗುತ್ತಿದ್ದರೂ ಕೂಡ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ವಯನಾಡ್‌ ಸಂಸದೆ ಪ್ರಿಯಾಂಕ ಗಾಂಧಿ ಗೈರಾಗಿದ್ದರು. ಸಂಸತ್ತಿನಲ್ಲಿ ಗೀತೆ ಹಾಡುವ ವೇಳೆ ವಿರೋಧ ಪಕ್ಷದ ಹಲವು ನಾಯಕರು ಗೌರವ ನೀಡುತ್ತಿಲ್ಲ’ ಎಂದು ಶಾ ಆರೋಪಿಸಿದ್ದಾರೆ.

ಶಾ ಹೇಳಿದ್ದೇನು?

* ನಾನು ಸತ್ಯವನ್ನು ಹೇಳುತ್ತಿದ್ದೇನೆ. ಸದನದಲ್ಲಿ ವಂದೇ ಮಾತರಂ ಚರ್ಚಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದರೊಬ್ಬರು (ಜೈರಾಮ್‌ರಮೇಶ್‌) ಹೇಳಿದರು

*ಸಂಸತ್ತಿನಲ್ಲಿ ವಂದೇ ಮಾತರಂ ಹಾಡುವಂತೆ ಬಿಜೆಪಿ ಸಂಸದ ರಾಮ್‌ನಾಯ್ಕ್‌ 1992ರಲ್ಲಿಯೇ ಒತ್ತಾಯಿಸಿದ್ದರು. ಎಲ್‌.ಕೆ. ಆಡ್ವಾಣಿ ಕೂಡ ಬೆಂಬಲಿಸಿದ್ದರು.

*ಆಗಲೂ ಕೂಡ ಇಂಡಿಯಾ ಒಕ್ಕೂಟದ ಸಂಸದರು ವಿರೋಧಿಸಿದ್ದರು. ಈಗಲೂ ಗೀತೆ ಹಾಡುವ ವೇಳೆ ವಿರೋಧ ಪಕ್ಷದ ಸಂಸತ್‌ನಿಂದ ಹೊರನಡೆದಿದ್ದನ್ನು ನಾನೇ ಕಣ್ಣಾರೆ ನೋಡಿದ್ದೇನೆ

* ಹೇಳಿಕೆಯನ್ನು ದೃಢೀಕರಿಸುವಂತೆ ಕೇಳಿದ ಜೈರಾಮ್‌ ರಮೇಶ್‌–ಗೀತೆ ಹಾಡುವ ವೇಳೆ ಹೊರನಡೆದ ಸದಸ್ಯರ ಪಟ್ಟಿ ನೀಡಿದ ರಾಜ್ಯಸಭಾ ಸಭಾಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.