ADVERTISEMENT

ಬ್ಯಾಂಕ್‌ ಲಾಕರ್‌ ತೆರೆಯಲು ಅನುಮತಿ ಕೋರಿದ ಪೀಟರ್‌

ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

ಪಿಟಿಐ
Published 27 ನವೆಂಬರ್ 2018, 20:09 IST
Last Updated 27 ನವೆಂಬರ್ 2018, 20:09 IST

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಪೀಟರ್‌ ಮುಖರ್ಜಿ ತಮ್ಮ ಬ್ಯಾಂಕ್‌ ಲಾಕರ್‌ ತೆರೆಯಲು ಅನುಮತಿ ನೀಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಪತ್ನಿ ಇಂದ್ರಾಣಿ ಮುಖರ್ಜಿ ಅವರಿಗೆ ಸೇರಿದ ಆಭರಣಗಳು ವರ್ಲಿ ಉಪನಗರದ ಬ್ಯಾಂಕಿನ ತಮ್ಮ ಲಾಕರ್‌ನಲ್ಲಿವೆ. ಇಂದ್ರಾಣಿ ಜತೆಗಿನ ವಿವಾಹ ವಿಚ್ಛೇದನದ ಅರ್ಜಿಯನ್ನು ಪರಸ್ಪರ ಸಮ್ಮತಿ ಮೇರೆಗೆ ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದು, ಇದರ ಭಾಗವಾಗಿ ಆಕೆಯ ಆಭರಣಗಳನ್ನು ಹಸ್ತಾಂತರಿಸಬೇಕಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜೆ.ಸಿ.ಜಗದಾಳೆ ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಪೀಟರ್‌ ವಿವರಿಸಿದ್ದಾರೆ.

ಈ ಮನವಿಗೆ ಸಿಬಿಐ ತನ್ನ ಪ್ರತಿಕ್ರಿಯೆಯನ್ನು ಇದೇ 30ರಂದು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದು ಸಂಸ್ಥೆಯ ಸಲಹೆಗಾರ ಭರತ್‌ ಬಾದಾಮಿ ಮಂಗಳವಾರ ತಿಳಿಸಿದ್ದಾರೆ. 2012ರಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪೀಟರ್‌ ಮತ್ತು ಇಂದ್ರಾಣಿ ಪ್ರಮುಖ ಆರೋಪಿಗಳಾಗಿದ್ದಾರೆ.

ADVERTISEMENT

ಪೀಟರ್‌ ಮುಂಬೈನ ಆರ್ಥರ್‌ ರೋಡ್‌ ಜೈಲಿನಲ್ಲಿದ್ದು, ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶೀನಾ ಬೋರಾ, ಇಂದ್ರಾಣಿಯ ಮೊದಲ ಪತಿಯ ಮಗಳು. ಪೀಟರ್‌ ಅವರ ಮೊದಲ ಪತ್ನಿಯ ಮಗ ರಾಹುಲ್‌ ಜೊತೆ ಶೀನಾ ಸಂಬಂಧ ಹೊಂದಿದ್ದ ಬಗ್ಗೆ ಅತೃಪ್ತರಾಗಿದ್ದ ಇಂದ್ರಾಣಿ, ಆಕೆಯನ್ನು ಕೊಂದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.