ADVERTISEMENT

’ಎಐಎಡಿಎಂಕೆ ತಿರಸ್ಕರಿಸಿ‘ ಪ್ರಚಾರ ಆರಂಭಿಸಿದ ಡಿಎಂಕೆ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ರಾಜಕೀಯ ಭರಾಟೆ

ಪಿಟಿಐ
Published 20 ಡಿಸೆಂಬರ್ 2020, 8:37 IST
Last Updated 20 ಡಿಸೆಂಬರ್ 2020, 8:37 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ–ಪ‍್ರತ್ಯಾರೋಪಗಳು ಆರಂಭವಾಗಿವೆ. ತನ್ನ ರಾಜಕೀಯ ಎದುರಾಳಿ, ಆಡಳಿತಾರೂಢ ಪಕ್ಷ ಎಐಎಡಿಎಂಕೆ ವಿರುದ್ಧ‍ ಪ್ರಮುಖ ವಿರೋಧ ಪಕ್ಷ ಡಿಎಂಕೆ, ‘ವಿ ರಿಜೆಕ್ಟ್‌ ಎಡಿಎಂಕೆ’ (ನಾವು ಎಡಿಎಂಕೆ ತಿರಸ್ಕರಿಸುತ್ತೇವೆ) ಹೆಸರಿನಡಿ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದೆ.

2011ರಿಂದ ಅಧಿಕಾರದಿಂದ ವಂಚಿತವಾಗಿರುವ ಡಿಎಂಕೆ ಈ ಬಾರಿಯ ಚುನಾವಣೆಯಲ್ಲಿ ಗೆದ್ದು, ಮತ್ತೆ ಆಡಳಿತ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸುತ್ತಿದೆ.

ತಮ್ಮ ಕ್ಷೇತ್ರ, ಸೇಲಂ ಜಿಲ್ಲೆಯ ಎಡಪ್ಪಾಡಿಯಿಂದ ಶನಿವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಮತ್ತೊಮ್ಮೆ ಪಕ್ಷಕ್ಕೆ ಬಹುಮತ ನೀಡುವಂತೆ ಜನರಲ್ಲಿ ಕೋರಿದ್ದಾರೆ. ಮರುದಿನವೇ ಡಿಎಂಕೆ ತನ್ನ ಪ್ರಚಾರ ಆರಂಭಿಸಿರುವುದು ಗಮನಾರ್ಹ.

ADVERTISEMENT

ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂದು ಆರೋಪಿಸುತ್ತಿರುವ ಡಿಎಂಕೆ, ನೀಟ್‌ ಪರೀಕ್ಷೆ ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಹಾಗೂ ನಡೆದ ಹೋರಾಟಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದೆ.

ಆಡಳಿತದಲ್ಲಿನ ವೈಫಲ್ಯ ಎಂಬ ತನ್ನ ಆರೋ‍ಪಗಳಿಗೆ ಸಮರ್ಥನೆಯಾಗಿ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಬಿಂಬಿಸುವ ವಿಡಿಯೊಗಳನ್ನು ಸಹ ಡಿಎಂಕೆ ಬಿಡುಗಡೆ ಮಾಡಿದೆ.

ಎಐಎಡಿಎಂಕೆ ವಿರುದ್ಧ ಗ್ರಾಮ ಮಟ್ಟದಲ್ಲಿ ಪ್ರಚಾರ ಆರಂಭಿಸಲೂ ಡಿಎಂಕೆ ಸಿದ್ಧತೆ ನಡೆಸಿದೆ. ‘ಗ್ರಾಮಗಳು ಹಾಗೂ ವಾರ್ಡ್‌ಗಳು ಸೇರಿದಂತೆ ಒಟ್ಟು 16,000 ಸ್ಥಳಗಳಿಗೆಪಕ್ಷದ ಹಿರಿಯ ಮುಖಂಡರು ಭೇಟಿ ನೀಡಿ, ಸಭೆಗಳನ್ನು ನಡೆಸುವರು’ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

‘ಡಿ. 25ರಿಂದ ಜನವರಿ 10 ವರೆಗೆ ಗ್ರಾಮಸಭೆಗಳು ನಡೆಯಲಿದ್ದು, ಪಕ್ಷದ 1,600 ಮುಖಂಡರು ಈ ಸಭೆಗಳನ್ನು ಸಂಘಟಿಸುವರು. ರಾಜ್ಯ ಸರ್ಕಾರದ ವಿರುದ್ಧ ಈ ಸಭೆಗಳಲ್ಲಿ ಗೊತ್ತುವಳಿ ಅಂಗೀಕರಿಸಲಾಗುವುದು’ ಎಂದು ಹೇಳಿದ್ದಾರೆ.

‘ಜನರು ರಾಜ್ಯ ಸರ್ಕಾರದ ವಿರುದ್ಧ ಆನ್‌ಲೈನ್‌ ಮೂಲಕವೂ ತಮ್ಮ ನಿಲುವು ವ್ಯಕ್ತಪಡಿಸಲು ಅನುಕೂಲವಾಗಲು ವೆಬ್‌ಸೈಟ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

ಇನ್ನು, ಪಕ್ಷದ ಮುಖಂಡರಾದ ಉದಯನಿಧಿ ಸ್ಟಾಲಿನ್‌, ಕನಿಮೋಳಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಎಂ.ಕೆ.ಸ್ಟಾಲಿನ್‌ ಅವರು ಆನ್‌ಲೈನ್‌ ಮೂಲಕ ಸಭೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.