ADVERTISEMENT

ಡಿಎಂಕೆ ಪ್ರಣಾಳಿಕೆಗೆ ಪಳನಿಸ್ವಾಮಿ ಟೀಕೆ

ಈಡೇರಿಸಬಹುದಾದ ಭರವಸೆಗಳನ್ನು ನೀಡಿ

ಪಿಟಿಐ
Published 16 ಮಾರ್ಚ್ 2021, 19:31 IST
Last Updated 16 ಮಾರ್ಚ್ 2021, 19:31 IST
ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪೊನ್‌ ರಾಧಾಕೃಷ್ಣನ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು
ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪೊನ್‌ ರಾಧಾಕೃಷ್ಣನ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು   

ಪುದುಕೋಟೈ (ತಮಿಳುನಾಡು): ‘ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ರಾಜಕೀಯ ಪಕ್ಷಗಳು ಜನರಿಗೆ ನೀಡಬೇಕು. ಜಾರಿಮಾಡಲಾಗದಂಥ ಭರವಸೆಗಳನ್ನು ಕೊಟ್ಟರೆ ಯಾವತ್ತೂ ಉದ್ದೇಶ ಈಡೇರುವುದಿಲ್ಲ’ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಆ ಮೂಲಕ ಅವರು ಪ್ರತಿಪಕ್ಷ ‘ಡಿಎಂಕೆಯ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ’ ಎಂದು ಟೀಕಿಸಿದ್ದಾರೆ. ಡಿಎಂಕೆಯು ಇತ್ತೀಚೆಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತದಾರರಿಗೆ 500ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದೆ.

‘2006ರಲ್ಲಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಭೂರಹಿತ ರೈತರಿಗೆ ಉಚಿತವಾಗಿ ತಲಾ ಎರಡು ಎಕರೆ ಭೂಮಿ ನೀಡುವ ಭರವಸೆ ನೀಡಿದ್ದರು. ಆ ಭರವಸೆ ಈಡೇರಿದೆಯೇ? ಪುನಃ ಜನರನ್ನು ಮರುಳುಗೊಳಿಸಿ ಅಧಿಕಾರ ಹಿಡಿಯಲು ಸ್ಟಾಲಿನ್‌ ಪ್ರಯತ್ನಿಸುತ್ತಿದ್ದಾರೆ ಎಂದರು.

ADVERTISEMENT

‘ಡಿಎಂಕೆಯ ಪ್ರಣಾಳಿಕೆ ಹಾದಿತಪ್ಪಿಸುವಂಥದ್ದು. ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಆದರೆ ರೈತರು ಸಹಕಾರ ಬ್ಯಾಂಕ್‌ಗಳಿಂದ ಪಡೆದಿದ್ದ ಒಟ್ಟಾರೆ ₹ 12,110 ಕೋಟಿ ಸಾಲವನ್ನು ನಮ್ಮ ಸರ್ಕಾರವು ಈಗಾಗಲೇ ಮನ್ನಾ ಮಾಡಿ, ಪ್ರಮಾಣಪತ್ರಗಳನ್ನೂ ನೀಡಿದೆ’ ಎಂದರು.

ತಮ್ಮ ಪಕ್ಷ (ಎಐಎಡಿಎಂಕೆ) ಹಿಂದೆ ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡುತ್ತಾ, ‘ಜಯಲಲಿತಾ ಅವರು 2011ರಲ್ಲಿ ಮತದಾರರಿಗೆ ಉಚಿತ ಟೇಬಲ್‌ ಫ್ಯಾನ್‌ ಹಾಗೂ ಮಿಕ್ಸರ್‌ ಗ್ರೈಂಡರ್‌ ಕೊಡುವುದಾಗಿ ಹೇಳಿದ್ದರು. ಅದರಂತೆ ಸರ್ಕಾರ ರಚನೆಯಾದ ನಂತರ ಅದನ್ನು ಜಾರಿ ಮಾಡಿದ್ದರು’ ಎಂದರು.

‘ನಮ್ಮ ಪಕ್ಷ ಈ ಬಾರಿ, ಜನರಿಗೆ ಉಚಿತವಾಗಿ ವಾಷಿಂಗ್‌ ಮಷೀನ್‌ ಹಾಗೂ ಸೋಲಾರ್‌ ಒಲೆಗಳನ್ನು ನೀಡುವ ಭರವಸೆ ನೀಡಿದೆ. ಎಲ್ಲರಿಗೂ ಲಾಭವಾಗಬೇಕು ಎಂಬುದು ಈ ಭರವಸೆಯ ಹಿಂದಿನ ಉದ್ದೇಶ’ ಎಂದರು.

‘ಅಧಿಕಾರಕ್ಕೆ ಬಂದ ನೂರು ದಿನದೊಳಗೆ ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಸ್ಟಾಲಿನ್‌ ಹೇಳುತ್ತಾರೆ. ಹಾಗಿದ್ದರೆ ಅವರು ಹಿಂದೆ ಡಿಸಿಎಂ ಹಾಗೂ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಪಳನಿಸ್ವಾಮಿ ಪ್ರಶ್ನಿಸಿದರು. ಕಾಂಗ್ರೆಸ್‌ನ ಸ್ಥಿತಿಯ ಬಗ್ಗೆ ಲೇವಡಿ ಮಾಡುತ್ತಾ, ‘2011ರಲ್ಲಿ 63 ಹಾಗೂ 2016ರಲ್ಲಿ 41 ಸ್ಥಾನಗಳನ್ನು ಗೆದ್ದಿದ್ದ, ಶತಮಾನಕ್ಕೂ ಹಳೆಯದಾದ ಪಕ್ಷವು ಈ ಬಾರಿ 25 ಕ್ಷೇತ್ರಗಳಿಗಾಗಿ ಮಿತ್ರಪಕ್ಷದ ಮುಂದೆ ಕೈಯೊಡ್ಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.