ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಗೆ ಇಂಡಿಯಾ ಬಣದಲ್ಲಿರುವ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು, ತಮಿಳುನಾಡಿನಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳನ್ನು ಇಂದು ಡಿಎಂಕೆ ಹೆಸರಿಸಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಅವರು ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಶಿವಗಂಗಾ, ತಿರುವಳ್ಳೂರ್, ಕರೂರ್, ಮೈಲಾದುತುರೈ, ವಿರುಧುನಗರ್, ತಿರುನಲ್ವೇಲಿ, ಕಡಲೂರು, ಕೃಷ್ಣಗಿರಿ, ಕನ್ಯಾಕುಮಾರಿ ಅವುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಪುದುಚೇರಿಯ ಏಕೈಕ ಲೋಕಸಭಾ ಕ್ಷೇತ್ರವನ್ನೂ ಡಿಎಂಕೆ, ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ ಎಂದಿರುವ ಟಿಪಿಸಿಸಿ ಅಧ್ಯಕ್ಷರು, ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಎಂದು ಹೇಳಿದ್ದಾರೆ.
ಸೀಟು ಹಂಚಿಕೆ ಒಪ್ಪಂದಕ್ಕೆ ಬಂದ ಕೆಲ ದಿನಗಳ ಬಳಿಕ ಕಾಂಗ್ರೆಸ್‌ಗೆ ಬಿಟ್ಟುಕೊಡುವ ಕ್ಷೇತ್ರಗಳನ್ನು ಡಿಎಂಕೆ ಹೆಸರಿಸಿದೆ.
ಕಾಂಗ್ರೆಸ್‌ನ ಸು ತಿರುನವುಕ್ಕರಸರ್ ಪ್ರತಿನಿಧಿಸುತ್ತಿರುವ ತಿರುಚಿರಾಪಳ್ಳಿ ಕ್ಷೇತ್ರವನ್ನು ವೈಕೊ ನೇತೃತ್ವದ ಎಂಡಿಎಂಕೆಗೆ ಬಿಟ್ಟುಕೊಡಲಾಗಿದೆ. ಈ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವೈಕೊ ಪುತ್ರ ದುರೈ ವೈಕೊ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್‌ಗೆ ನೀಡಲಾಗಿರುವ ಕಡಲೂರು, ಮೈಲಾದುತುರೈ, ತಿರುನಲ್ವೇಲಿ ಕ್ಷೇತ್ರಗಳಲ್ಲಿ ಸದ್ಯ ಡಿಎಂಕೆ ಸಂಸದರಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಮಧುರೈ ಮತ್ತು ದಿಂಡಿಗಲ್ ಕ್ಷೇತ್ರಗಳನ್ನು ಸಿಪಿಐ(ಎಂ) ಬಿಟ್ಟುಕೊಡಲಾಗಿದ್ದು, ನಾಗಪಟ್ಟಣಂ ಮತ್ತು ತಿರುಪೂರ್‌ಗಳನ್ನು ಸಿಪಿಐಗೆ ನೀಡಲಾಗಿದೆ. ಮೀಸಲು ಕ್ಷೇತ್ರಗಳಾದ ಚಿದಂಬರಂ ಮತ್ತು ವಿಕ್ಕುಪುರಂಗಳನ್ನು ವಿಸಿಕೆಗೆ ನೀಡಲಾಗಿದೆ. ಐಯುಎಂಎಲ್ ರಾಮನಾಥಪುರಂನಿಂದ ಸ್ಪರ್ಧಿಸಲಿದ್ದು, ಕೊಂಗನಾಡು ಮಕ್ಕಳ್ ದೇಸೀಯ ಕಛ್(ಕೆಎಂಡಿಕೆ) ಪಕ್ಷವು ನಾಮಕಲ್‌ನಿಂದ ಕಣಕ್ಕಿಳಿಯಲಿದೆ.
40 ಲೋಕಸಭಾ ಕ್ಷೇತ್ರಗಳ ಪೈಕಿ ಡಿಎಂಕೆ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಮಿತ್ರಪಕ್ಷಗಳು 18 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.