ADVERTISEMENT

ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಸಂಸತ್‌ ಭವನದ ಹೊರಗೆ ಪ್ರತಿಭಟನೆ

ಕಪ್ಪು ಅಂಗಿ ಧರಿಸಿ ಸದನಕ್ಕೆ ಬಂದಿದ್ದ ಡಿಎಂಕೆ ಸದಸ್ಯರು

ಪಿಟಿಐ
Published 11 ಮಾರ್ಚ್ 2025, 16:13 IST
Last Updated 11 ಮಾರ್ಚ್ 2025, 16:13 IST
ಹಿಂದಿ ಹೇರಿಕೆ ವಿರೋಧಿಸಿ ಡಿಎಂಕೆ ಸಂಸದ ಎ.ರಾಜಾ ಹಾಗೂ ಎಂಡಿಎಂಕೆ ಮುಖ್ಯಸ್ಥ ವೈಕೊ ನೇತೃತ್ವದಲ್ಲಿ ನವದೆಹಲಿಯಲ್ಲಿ ಮಂಗಳವಾರ ಸಂಸತ್‌ ಭವನದ ಹೊರಗಡೆ ಪ್ರತಿಭಟನೆ ನಡೆಯಿತು  –ಪಿಟಿಐ ಚಿತ್ರ 
ಹಿಂದಿ ಹೇರಿಕೆ ವಿರೋಧಿಸಿ ಡಿಎಂಕೆ ಸಂಸದ ಎ.ರಾಜಾ ಹಾಗೂ ಎಂಡಿಎಂಕೆ ಮುಖ್ಯಸ್ಥ ವೈಕೊ ನೇತೃತ್ವದಲ್ಲಿ ನವದೆಹಲಿಯಲ್ಲಿ ಮಂಗಳವಾರ ಸಂಸತ್‌ ಭವನದ ಹೊರಗಡೆ ಪ್ರತಿಭಟನೆ ನಡೆಯಿತು  –ಪಿಟಿಐ ಚಿತ್ರ     

ನವದೆಹಲಿ: ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ದಕ್ಷಿಣದ ರಾಜ್ಯಗಳ ಸಂಸದರು ಗಲಾಟೆ ಮಾಡಿದ ಕಾರಣ, ರಾಜ್ಯಸಭೆಯ ಬೆಳಗಿನ ಕಲಾಪವನ್ನು 40 ನಿಮಿಷಗಳಷ್ಟು ಮುಂದೂಡಲಾಯಿತು.

ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಡಿಎಂಕೆ ಹಾಗೂ ಇತರ ಪಕ್ಷಗಳ ಸಂಸದರು ನಿಯಮ 267ರಡಿ ನೋಟಿಸ್‌ ನೀಡಿದ್ದರು.

ಪೀಠದಲ್ಲಿದ್ದ ಉಪಸಭಾಪತಿ, ಈ ನೋಟಿಸ್‌ಗಳನ್ನು ತಿರಸ್ಕರಿಸಿದಾಗ, ವಿಪಕ್ಷಗಳ ಸಂಸದರು ಗಲಾಟೆ ಶುರು ಮಾಡಿದರಲ್ಲದೇ, ಪೀಠದ ಮುಂದೆ ಬಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಕಪ್ಪು ಅಂಗಿಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಡಿಎಂಕೆ ಸದಸ್ಯರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

‘ಈ ವಿಚಾರ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಹೀಗಾಗಿ, ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಬೇಕು’ ಎಂಬ ಹರಿವಂಶ್‌ ಸಿಂಗ್ ಅವರ ಮನವಿಗೆ ಪ್ರತಿಭಟನೆ ನಿರತ ಸಂಸದರು ಕಿವಿಗೊಡಲಿಲ್ಲ. ಆಗ, ಹರಿವಂಶ್ ಸಿಂಗ್ ಅವರು ಕಲಾಪವನ್ನು ಮಧ್ಯಾಹ್ನ 12ರ ವರೆಗೆ ಮುಂದೂಡಿದರು.

ಡಿಎಂಕೆಯ ಆರ್‌.ಗಿರಿರಾಜನ್, ಎಂಡಿಎಂಕೆ ಪಕ್ಷದ ವೈಕೊ, ಸಿಪಿಐನ ಸಂತೋಷ್‌ ಕುಮಾರ್ ಪಿ. ಮಾತನಾಡಿದರು.

ತಮಿಳು ಭಾಷಿಕರ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ದೂರಿ, ಡಿಎಂಕೆ, ಎಂಡಿಎಂಕೆ ಸಂಸದರು, ನಂತರ ಸಂಸತ್ ಭವನದ ಹೊರಗೆ ಪ್ರತಿಭಟಿಸಿದರು. 

‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಜೆ.ಪಿ.ನಡ್ಡಾ

‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್‌ನ (ಎನ್‌ಎಚ್‌ಎಂ) ‘ಕಾರ್ಯಕ್ರಮ ಸಂಚಾಲಕ ಗುಂಪು’ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಇದನ್ನು ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.

‘ಆಶಾ ಕಾರ್ಯಕರ್ತ’ರ ಗೌರವ ಧನ ಹೆಚ್ಚಿಸಬೇಕು ಎಂದು ರಾಜ್ಯ ಗಳು ಬೇಡಿಕೆ ಮುಂದಿಟ್ಟಿರುವ ಮಧ್ಯೆಯೇ, ಕೇಂದ್ರ ಈ ಮಾತು ಹೇಳಿದೆ.

‘ಡೀಪ್‌ಸೀಕ್’ ನಿಷೇಧಕ್ಕೆ ‘ಕೈ’ ಒತ್ತಾಯ

‘ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ, ಚೀನಾದ ಕೃತಕ ಬುದ್ಧಿಮತ್ತೆ(ಎ.ಐ) ಆ್ಯಪ್‌ ‘ಡೀಪ್‌ ಸೀಕ್‌’ಅನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಸಂಸದ ಗೋವಾಲ್ ಕೆ.ಪಡವಿ ಲೋಕಸಭೆಯಲ್ಲಿ ಮಂಗಳವಾರ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅರುಣಾಚಲ ಪ್ರದೇಶವು ಭಾರತದ ಭಾಗವೇ ಎಂಬ ಪ್ರಶ್ನೆಗೆ ‘ಡೀಪ್‌ಸೀಕ್‌’ ಉತ್ತರ ನೀಡಿಲ್ಲ. ಹೀಗಾಗಿ ಈ ಆ್ಯಪ್‌ ಅನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ಈ ವಿಚಾರವಾಗಿ ಚೀನಾಕ್ಕೆ ನೋಟಿಸ್‌ ಜಾರಿ ಮಾಡುವಂತೆಯೂ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.