ADVERTISEMENT

ಅಧಿವೇಶನ ರದ್ದು: ಕೇಂದ್ರ ವಿರುದ್ಧ ಡಿಎಂಕೆ, ಶಿವಸೇನೆ ಕಿಡಿ

ಪಿಟಿಐ
Published 17 ಡಿಸೆಂಬರ್ 2020, 15:08 IST
Last Updated 17 ಡಿಸೆಂಬರ್ 2020, 15:08 IST
ಶಿವಸೇನಾ
ಶಿವಸೇನಾ   

ಚೆನ್ನೈ/ ಮುಂಬೈ: ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕೋವಿಡ್‌–19 ಕಾರಣ ತಿಳಿಸಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಡಿಎಂಕೆ ಹಾಗೂ ಶಿವಸೇನೆ ಹರಿಹಾಯ್ದಿವೆ.

‘ಇಂತಹ ಮಹತ್ವದ ವಿಚಾರದಲ್ಲಿ ಪ್ರತಿಪಕ್ಷಗಳ ಸಲಹೆಯನ್ನೂ ಕೇಳದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಬಿಜೆಪಿ ‘ದೊಡ್ಡಣ್ಣ’ನಂತೆ ವರ್ತಿಸಿದೆ’ ಎಂದು ಡಿಎಂಕೆ ಟೀಕಿಸಿದೆ.

‘ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಚೀನಾದೊಂದಿಗಿನ ಗಡಿ ಸಂಘರ್ಷದ ಕುರಿತು ಸಂಸತ್‌ನಲ್ಲಿ ಸುದೀರ್ಘ ಚರ್ಚೆ ನಡೆಯಬೇಕಿತ್ತು. ಹೀಗಿರುವಾಗ ಬಿಜೆಪಿಯು ಬೇಕಂತಲೇ ಅಧಿವೇಶನ ರದ್ದು ಮಾಡಿದೆ’ ಎಂದು ಡಿಎಂಕೆ ಸಂಸದ ಟಿ.ಆರ್‌.ಬಾಲು ಗುರುವಾರ ದೂರಿದ್ದಾರೆ.

ADVERTISEMENT

‘ದೇಶದ ಆರ್ಥಿಕತೆ ಹದಗೆಟ್ಟಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತರ ಮೊರೆಯನ್ನು ಆಲಿಸಲು ಸರ್ಕಾರ ಸಿದ್ಧವಿಲ್ಲ’ ಎಂದು ಶಿವಸೇನಾ ಟೀಕಿಸಿದೆ.

‘ಈ ಕುರಿತು ಅಧಿವೇಶನದಲ್ಲಿ ಚರ್ಚಿಸುವಂತೆ ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿಯಬಹುದು ಎಂಬುದನ್ನು ಅರಿತಿರುವ ಸರ್ಕಾರವು ಮುಂದಾಗಬಹುದಾದ ಮುಖಭಂಗದಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಅಧಿವೇಶನ ರದ್ದು ಮಾಡಿದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ತರಾಟೆಗೆ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.