ADVERTISEMENT

ರಾಜ್ಯಪಾಲರ ಹುದ್ದೆ ನಿಷ್ಪ್ರಯೋಜಕ: ಡಿಎಂಕೆ ಟೀಕೆ

ಪಿಟಿಐ
Published 1 ಡಿಸೆಂಬರ್ 2022, 15:56 IST
Last Updated 1 ಡಿಸೆಂಬರ್ 2022, 15:56 IST
ಡಿಎಂಕೆ ಲೋಗೊ
ಡಿಎಂಕೆ ಲೋಗೊ   

ಚೆನ್ನೈ: ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಗುರಿಯಾಗಿಸಿಕೊಂಡು ಡಿಎಂಕೆ ಶಾಸಕ ಟಿ.ಆರ್.ಬಿ. ರಾಜಾ ಅವರು, ‘ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರ ಹುದ್ದೆಯು ಅತ್ಯಂತ ನಿಷ್ಪ್ರಯೋಜಕ’ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಜಾ, ‘ರಾಜಕೀಯವಾಗಿ ನೇಮಕಗೊಂಡ ವ್ಯಕ್ತಿಯೊಬ್ಬರು ರಾಜ್ಯಪಾಲರ ಹುದ್ದೆಯನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದು, ‘ಪ್ರಜಾಪ್ರಭುತ್ವದ ಮೇಲೆ ಕಳಂಕ’. ‘ಗೆಟ್ ಔಟ್ ರವಿ’ ಎನ್ನುವ ಹ್ಯಾಷ್ ಟ್ಯಾಗ್ ಅನ್ನೂ ಬಳಸಿದ್ದಾರೆ.

ಅಷ್ಟೇ ಅಲ್ಲ, ರಾಜಾ ತಮ್ಮ ಟ್ವೀಟ್‌ನಲ್ಲಿ ‘ಜಗತ್ತಿನ ಅತ್ಯಂತ ಅನುಪಯುಕ್ತ ವಸ್ತುಗಳು’ ಎನ್ನುವ ಪಟ್ಟಿ ಮಾಡಿ ಅದರಲ್ಲಿ ವಿವಿಧ ರೀತಿಯ ವಸ್ತುಗಳ ಜತೆಗೆ ಆರ್.ಎನ್. ರವಿ ಅವರ ಚಿತ್ರವನ್ನೂ ಹಾಕಿದ್ದಾರೆ.

ADVERTISEMENT

ಡಿಎಂಕೆ ಐಟಿ ವಿಭಾಗದ ಕಾರ್ಯದರ್ಶಿಯೂ ಆಗಿರುವ ರಾಜಾ, ಶಾಸಕ ಹಾಗೂ ಪಕ್ಷದ ಹಿರಿಯ ನಾಯಕ ಟಿ.ಆರ್. ಬಾಲು ಅವರ ಪುತ್ರ.

ಪೋಸ್ಟ್‌ನಲ್ಲಿ ಡಿಎಂಕೆಯ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಜನಪ್ರಿಯ ಹೇಳಿಕೆಯೊಂದನ್ನು ಉಲ್ಲೇಖಿಸಿರುವ ರಾಜಾ, ‘ಮೇಕೆಗೆ ಗಡ್ಡ ಬೇಕೇ? ರಾಜ್ಯಕ್ಕೆ ರಾಜ್ಯಪಾಲರು ಬೇಕೆ? ಎರಡೂ ಅಗತ್ಯವಿಲ್ಲ’ ಎಂದೂ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಿಗೆ ಹಾಗೂ ಡಿಎಂಕೆ ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರವಿ ಅವರೊಂದಿಗೆ ಡಿಎಂಕೆ ಈ ಹಿಂದೆಯೂ ವಾಗ್ದಾಳಿ ನಡೆಸಿತ್ತು. ರವಿ ಅವರು ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಅನೇಕ ವಿಷಯಗಳಲ್ಲಿ ಬಿಜೆಪಿಯ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದೂ ಡಿಎಂಕೆಯು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.