ADVERTISEMENT

ದಿ ಕಾಶ್ಮೀರ್ ಫೈಲ್ಸ್: ಸೂಕ್ಷ್ಮ ಸಮಸ್ಯೆಗಳನ್ನು ರಾಜಕೀಯಗೊಳಿಸದಿರಿ ಎಂದ ಎಂವಿಎ

ಐಎಎನ್ಎಸ್
Published 20 ಮಾರ್ಚ್ 2022, 7:17 IST
Last Updated 20 ಮಾರ್ಚ್ 2022, 7:17 IST
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಪೋಸ್ಟರ್
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಪೋಸ್ಟರ್   

ನವದೆಹಲಿ: ದೇಶದಾದ್ಯಂತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಪರ-ವಿರೋಧದ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ, ಬಿಜೆಪಿ ಸಿನಿಮಾವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಭಾಗವಾಗಿರುವ ಶಿವಸೇನಾ ಮತ್ತು ಎನ್‌ಸಿಪಿ ಪಕ್ಷಗಳು ಕಿಡಿಕಾರಿವೆ.

ಭಾನುವಾರ ಟ್ವೀಟ್ ಮಾಡಿರುವ ಎನ್‌ಸಿಪಿ ನಾಯಕ ಮಜೀದ್ ಮೆಮನ್, 'ಸಿನಿಮಾಗಳು ಇತಿಹಾಸದ ನೈಜ ಘಟನೆಯ ನಿಖರವಾದ ನಿರೂಪಣೆಯಾಗಿರುವುದಿಲ್ಲ. ಅವು ಕಾಲ್ಪನಿಕ, ಅತಿರೇಕದ ಕಲ್ಪನೆ ಮತ್ತು ಊಹಾತ್ಮಕ ಕಥೆಗಳನ್ನು ಆಧರಿಸಿರುತ್ತವೆ. ಕಪೋಲಕಲ್ಪಿತ ಚಿತ್ರಣಗಳು ನಿಜವೆಂದು ಜನರ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿರುವುದು ವಿಪರ್ಯಾಸ' ಎಂದಿದ್ದಾರೆ.

ಶಿವಸೇನಾ ವಕ್ತಾರ ಸಂಜಯ್ ರಾವುತ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಪ್ರಯೋಜನಕ್ಕಾಗಿ ಕಾಶ್ಮೀರದಂತ ಸೂಕ್ಷ್ಮ ಸಮಸ್ಯೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ದಿ ಕಾಶ್ಮೀರ್ ಫೈಲ್ಸ್ ಕೇವಲ ಸಿನಿಮಾವಷ್ಟೆ, ಇದು ಯಾರೊಬ್ಬರಿಗೂ ರಾಜಕೀಯ ಲಾಭವನ್ನು ತಂದುಕೊಡುವುದಿಲ್ಲ' ಎಂದಿದ್ದಾರೆ.

ADVERTISEMENT

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ, ಕೆಲವು ಸಿನಿಮಾಗಳು ಬದಲಾವಣೆಗೆ ಸ್ಫೂರ್ತಿ ನೀಡುತ್ತವೆ. ಆದರೆ ಕಾಶ್ಮೀರ್ ಫೈಲ್ಸ್ ಸಿನಿಮಾ ಧ್ವೇಷವನ್ನು ಪ್ರಚೋದಿಸುತ್ತಿದೆ. ಸತ್ಯವು ನ್ಯಾಯ, ಪುನರ್ವಸತಿ, ಸಾಮರಸ್ಯ ಮತ್ತು ಶಾಂತಿಗೆ ಕಾರಣವಾಗಬೇಕು. ಪ್ರಚಾರವು ಸತ್ಯವನ್ನು ತಿರುಚುತ್ತದೆ, ಕೋಪವನ್ನು ಕೆರಳಿಸಲು ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ಇತಿಹಾಸವನ್ನು ತಿರುಚುತ್ತದೆ. ವಿಭಜನೆ ಮತ್ತು ಆಳಲು ಪ್ರಚಾರಕರು ಭಯವನ್ನು ಬಳಸಿಕೊಳ್ಳುತ್ತಾರೆ' ಎಂದಿದ್ದರು.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಸುತ್ತ ನಡೆಯುತ್ತಿರುವ ನಿರೂಪಣೆ ಮತ್ತು ಚರ್ಚೆಯನ್ನು ಅದರ ಪಾಡಿಗೆ ಬಿಡುವುದು ಸೂಕ್ತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಮೇಶ್ ಅವರಿಗೆ ತಿರುಗೇಟು ನೀಡಿದ್ದಾರೆ.

ನಾವಿದನ್ನ ಯಾಕೆ ಚರ್ಚಿಸಬಾರದು ಜೈರಾಮ್ ರಮೇಶ್ ಜೀ. ನಿಮ್ಮ ದೃಷ್ಠಿಕೋನವನ್ನು ಕೂಡ ಸಾರ್ವಜನಿಕರು ತಿಳಿದುಕೊಳ್ಳುತ್ತಿದ್ದಾರೆ. ಈ ಸಿನಿಮಾ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಇದಕ್ಕಾಗಿ ನಾನು ಸಂತೋಷ ಪಡುತ್ತೇನೆ ಎಂದು ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.