ADVERTISEMENT

ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗೆ ಲೈಂಗಿಕ ಕಿರುಕುಳ ಯತ್ನ: ವೈದ್ಯ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 15:06 IST
Last Updated 4 ಮಾರ್ಚ್ 2021, 15:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್‌ನ ಕೋವಿಡ್ ಕೇರ್ ಸೆಂಟರ್ ಒಂದರಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಲಿದ್ದ ಮಹಿಳೆಗೆ ವೈದ್ಯರು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಲೇ ಔರಂಗಾಬಾದ್ ನಗರ ಪಾಲಿಕೆ ಆರೋಪಿ ವೈದ್ಯರನ್ನು ಅಮಾನತು ಮಾಡಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಔರಂಗಾಬಾದ್‌ನ ಪದಂಪುರ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ವೈದ್ಯರು ಮಹಿಳೆಯ ಬಳಿ ಲೈಂಗಿಕವಾಗಿ ಸಹಕರಿಸುವಂತೆ ಕೋರಿದ್ದರು ಎಂದು ಮಾಧ್ಯಮ ವರದಿ ಆಧರಿಸಿ ಹೇಳಿದ್ದಾರೆ.

ಜತೆಗೆ ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರು ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕೋವಿಡ್ ಕೇರ್ ಕೇಂದ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ.

ADVERTISEMENT

ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ರೋಗಿಯ ಮೇಲೆ ದೌರ್ಜನ್ಯ ನಡೆದಿಲ್ಲ, ವೈದ್ಯರು ಕಿರುಕುಳ ನೀಡಲು ಯತ್ನಿಸಿದ್ದಾರೆ, ಅವರನ್ನು ಅಮಾನತು ಮಾಡಲಾಗಿದೆ. ಮಹಿಳೆ ಮನೆಯವರು ಯಾವುದೇ ದೂರು ನೀಡಿಲ್ಲ, ಅಲ್ಲದೆ, ಮಹಿಳೆಯ ಪತಿ ಮತ್ತು ವೈದ್ಯರು ಪರಸ್ಪರ ಪರಿಚಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.