ADVERTISEMENT

ಆಯುರ್ವೇದ, ಹೋಮಿಯೊಪತಿ ಪಿಜಿ ಪ್ರವೇಶ ಪರೀಕ್ಷೆ ಮುಂದೂಡಲು ಕೋರಿ ಸುಪ್ರೀಂಗೆ ಅರ್ಜಿ

ಪಿಟಿಐ
Published 17 ಆಗಸ್ಟ್ 2020, 11:41 IST
Last Updated 17 ಆಗಸ್ಟ್ 2020, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಗಸ್ಟ್ 29ರಂದು ನಿಗದಿಪಡಿಸಿರುವ ಅಖಿಲ ಭಾರತ ಆಯುಷ್‌ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ– 2020 (ಎಐಎಪಿಜಿಇಟಿ) ಅನ್ನು ಮುಂದೂಡುವಂತೆ ಕೆಲವು ವೈದ್ಯರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆಯುರ್ವೇದ (ಬಿಎಎಂಎಸ್‌) ಮತ್ತು ಹೋಮಿಯೊಪಥಿ (ಬಿಎಚ್‌ಎಂಎಸ್‌) ಪದವಿ ಪೂರೈಸಿರುವ 17 ವೈದ್ಯರು ಎಐಎಪಿಜಿಇಟಿ ಪರೀಕ್ಷೆ ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

’ನಾವು ವಿವಿಧ ಆಸ್ಪತ್ರೆಗಳಲ್ಲಿ ಕೊರೊನಾ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದೇವೆ. ಈಗ ಆಗಸ್ಟ್‌ 29ರಂದು ಎಐಎಜಿಪಿಇಟಿ ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಆಗಸ್ಟ್‌ 11 ರಂದು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗಬೇಕೆಂದರೆ, ಇಲ್ಲಿಂದ ನಾವು ಪರೀಕ್ಷಾ ಕೇಂದ್ರಗಳಿರುವ ಸ್ಥಳಗಳಿಗೆ ತೆರಳಿ, ಸ್ಥಳೀಯ ನಿಯಮದ ಪ್ರಕಾರ 14 ದಿನ ಕ್ವಾರಂಟೈನ್ ಆಗಬೇಕು. ಹೀಗೆ ಮಾಡುವುದರಿಂದ ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗುತ್ತದೆ. ಇದರಿಂದ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತದೆ’ ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ. ವಕೀಲ ಅಲಖ್ ಅಲೋಕ್ ಶ್ರೀವತ್ಸ ಅವರ ಮೂಲಕ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT

ಆಗಸ್ಟ್‌ 11ರಂದು ಎನ್‌ಟಿಎ ನೀಡಿರುವ ಪ್ರಕಟಣೆ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅನ್‌ಲಾಕ್ 3 ಮಾರ್ಗಸೂಚಿಯ ಉಲ್ಲಂಘನೆಯಾಗಿದೆ. ಆ ನಿಯಮದ ಪ್ರಕಾರ ಯಾವುದೇ ಶಾಲೆ, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಆಗಸ್ಟ್‌ 31ರವರೆಗೆ ತೆರೆಯುವಂತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

’ದೇಶದಲ್ಲಿ ಕೋವಿಡ್‌ 19 ಸೋಂಕಿನ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳತ್ತಿದೆ. ಆತಂಕಪಡುವಷ್ಟು ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆಯ ದಿನಾಂಕ ಪ್ರಕಟಿಸುವ ಮೂಲಕ ಪರೀಕ್ಷಾಂಕ್ಷಿಗಳ ಬಗ್ಗೆ ಎನ್‌ಟಿಎ ಅಸೂಕ್ಷ್ಮವಾಗಿ ವರ್ತಿಸಿದೆ ’ ಎಂದು ಅರ್ಜಿದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಪ್ರಮಾಣ ಇಳಿಕೆಯಾದ ನಂತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿರುವ ಅರ್ಜಿದಾರರು, ಮುಂದೂಡುವ ಪರೀಕ್ಷೆ ದಿನಾಂಕವನ್ನು ಕನಿಷ್ಠ ಒಂದು ತಿಂಗಳ ಮುಂಚೆಯೇ ಪ್ರಕಟಣೆ ಮೂಲಕ ತಿಳಿಸಬೇಕೆಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.