ನವದೆಹಲಿ: ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಾಲ್ಕು ವಾರಗಳ ಸಮಯಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ. ಜತೆಗೆ ತಲಾ ₹ 5000 ವೆಚ್ಚದ ಬಾಬ್ತು ಪಾವತಿಸುವಂತೆಯೂ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಪ್ರಸನ್ನ ಬಿ ವರಾಳೆ ಅವರನ್ನೊಳಗೊಂಡ ಪೀಠವು ಈ ಕುರಿತ ಅರ್ಜಿಯ ವಿಚಾರಣೆ ಮಂಗಳವಾರ ನಡೆಸಿತು.
‘ಸುಪ್ರೀಂ ಕೋರ್ಟ್ ಹಲವು ಬಾರಿ ನಿರ್ದೇಶನಗಳನ್ನು ನೀಡಿದ ಹೊರತಾಗಿಯೂ ಕೆಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಿತಿಗತಿ ವರದಿ ಸಲ್ಲಿಸಿಲ್ಲ’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದಾಗ, ಪೀಠವು ಈ ಕುರಿತು ನಿರ್ದೇಶನ ನೀಡಿತು.
ವಿಚಾರಣೆ ವೇಳೆ, ಸಂಬಂಧಿಸಿದ ರಾಜ್ಯಗಳ ವಕೀಲರು ಇನ್ನಷ್ಟು ಸಮಯಾವಕಾಶ ಕೋರಿದರು. ಅಗ ಪೀಠವು ₹ 5,000 ವೆಚ್ಚದ ಬಾಬ್ತು ಪಾವತಿಸುವ ಜತೆಗೆ ಸ್ಥಿತಿಗತಿ ವರದಿ ಸಲ್ಲಿಸಲು ಇನ್ನೂ ನಾಲ್ಕು ವಾರಗಳ ಸಮಯ ನೀಡಿತು. ಈ ಮೊತ್ತವನ್ನು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಕೇಂದ್ರಕ್ಕೆ ಪಾವತಿಸುವಂತೆ ಪೀಠ ಸೂಚಿಸಿತು. ನಿಗದಿತ ಅವಧಿಯೊಳಗೆ ವರದಿ ಸಲ್ಲಿಸದಿದ್ದರೆ, ವೆಚ್ಚದ ಬಾಬ್ತಿನ ಮೊತ್ತವು ಎರಡರಷ್ಟು ಹೆಚ್ಚಾಗಲಿದೆ ಎಂದು ಹೇಳಿದ ಪೀಠವು, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿತು.
ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳು ಹಾಗೂ ದಾದ್ರಾ ಮತ್ತು ನಗರ ಹವೇಲಿ, ದಾಮನ್ ಮತ್ತು ದಿಯು, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ ವರದಿ ಸಲ್ಲಿಸಿಲ್ಲ ಎಂಬುದನ್ನು ಪೀಠ ಗಮನಿಸಿತು.
ಕೌಟುಂಬಿಕ ದೌರ್ಜನ್ಯ (ಮಹಿಳೆಯರ ರಕ್ಷಣೆ) ಕಾಯ್ದೆಯ ಜಾರಿಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ 2024ರ ಡಿಸೆಂಬರ್ 2ರಂದು ಸೂಚಿಸಿತ್ತು. ಜನವರಿ 17ರಂದು ನ್ಯಾಯಾಲಯವು, ಈ ವರದಿ ಸಲ್ಲಿಕೆಯ ದಿನಾಂಕವನ್ನು ಫೆಬ್ರುವರಿ 14ರವರೆಗೂ ವಿಸ್ತರಿಸಿತ್ತು.
ಮುಖ್ಯಾಂಶಗಳು... * ರಾಜ್ಯ, ಕೇಂದ್ರಾಡಳಿ ಪ್ರದೇಶಗಳಿಗೆ ನಿರ್ದೇಶನ * ಮಧ್ಯಸ್ಥಿಕೆ ಕೇಂದ್ರಕ್ಕೆ ಹಣ ಪಾವತಿಸಲು ಸೂಚನೆ * ನಾಲ್ಕು ವಾರ ಮೀರಿದರೆ ದುಪ್ಪಟ್ಟು ಹಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.