ADVERTISEMENT

ಮಹಿಳಾ ಆಯೋಗಕ್ಕೆ 2020ರಲ್ಲಿ ದೂರುಗಳ ಸರಮಾಲೆ

ಕೌಟುಂಬಿಕ ಹಿಂಸಾಚಾರದಿಂದ ಮುಕ್ತಿ, ಘನತೆಯ ಬದುಕಿಗಾಗಿ ಹಂಬಲ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 13:53 IST
Last Updated 3 ಜನವರಿ 2021, 13:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೌಟುಂಬಿಕ ಹಿಂಸಾಚಾರದಿಂದ ಮುಕ್ತಿ, ಘನತೆಯ ಬದುಕಿಗಾಗಿ ಹಂಬಲಿಸಿ 2020ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಂತ್ರಸ್ತೆಯರಿಂದ ದೂರುಗಳ ಸರಮಾಲೆಯೇ ಬಂದಿದೆ. ಕೋವಿಡ್‌–19ನಿಂದಾಗಿ ಮಹಿಳೆಯರು ಎದುರಿಸಿದ ಸಮಸ್ಯೆಗಳ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

2019ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 19,730 ದೂರಗಳು ಬಂದಿದ್ದರೆ, 2020ರಲ್ಲಿ 23,722 ದೂರಗಳು ಬಂದಿದ್ದು, ಹಿಂದಿನ ವರ್ಷಕ್ಕಿಂತ ದೂರುಗಳ ಪ್ರಮಾಣದಲ್ಲಿ ಶೇ 20ರಷ್ಟು ಏರಿಕೆಯಾಗಿದೆ.

ಅಧಿಕೃತ ಅಂಕಿ–ಅಂಶಗಳ ಪ್ರಕಾರ, ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2019ರಲ್ಲಿ 2,960 ದೂರುಗಳು ಬಂದಿದ್ದರೆ, 2020ರಲ್ಲಿ 5,294 ದೂರುಗಳು ಬಂದಿವೆ. ಒಟ್ಟಾರೆ ಕೌಟುಂಬಿಕ ಹಿಂಸಾಚಾರದ ಪ್ರಮಾಣವು ಶೇ 79ರಷ್ಟು ಹೆಚ್ಚಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

ADVERTISEMENT

ಘನತೆಯಿಂದ ಬದುಕುವ ಹಕ್ಕಿಗಾಗಿ ಕೋರಿ 2020ರಲ್ಲಿ ದಾಖಲಾದ ದೂರುಗಳ ಸಂಖ್ಯೆ 7,708. 2019ರಲ್ಲಿ ಈ ಸಂಖ್ಯೆ 4,694 ಇತ್ತು.

2020ರ ಮೊದಲ ಆರು ತಿಂಗಳಿಗಿಂತ ಕೊನೆಯ ಆರು ತಿಂಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲೂ ಜುಲೈನಲ್ಲಿ ದೂರುಗಳ ಸಂಖ್ಯೆ 660ಕ್ಕೆ ತಲುಪಿತ್ತು ಎಂದು ಆಯೋಗ ಹೇಳಿದೆ.

ಲಾಕ್‌ಡೌನ್ ಸಮಯದಲ್ಲಿ (ಏಪ್ರಿಲ್‌–ಮೇ) ಆಯೋಗಕ್ಕೆ 708 ದೂರುಗಳು ಬಂದಿವೆ. ಆದರೆ,2019ರಲ್ಲಿ ಇದೇ ಸಮಯದಲ್ಲಿ 459 ದೂರುಗಳು ದಾಖಲಾಗಿದ್ದವು. ಕೋವಿಡ್–19 ಮತ್ತು ಅದರಿಂದ ಉಂಟಾದ ಆರ್ಥಿಕ ಕುಸಿತವು ಮಹಿಳೆಯರ ಜೀವನದ ಮೇಲೆ ಅಗಾಧ ಪರಿಣಾಮ ಬೀರಿದೆ. ಲಾಕ್‌ಡೌನ್ ಸಮಯದಲ್ಲಿ ವಾಟ್ಸ್ ಆ್ಯಪ್ ಮೂಲಕ ದೂರು ದಾಖಲಿಸಲು ಮಹಿಳಾ ಆಯೋಗವು ಕ್ರಮ ಕೈಗೊಂಡಿತು. ಇದರಿಂದಾಗಿ ಹೆಚ್ಚಿನ ಪ್ರಕರಣಗಳು ವರದಿಯಾದವು ಎಂದೂ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.