ADVERTISEMENT

ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸ್‌ ಅಧಿಕಾರಿ ಹತ್ಯೆ, ಡಿಸಿಪಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 14:36 IST
Last Updated 24 ಫೆಬ್ರುವರಿ 2020, 14:36 IST
ಈಶಾನ್ಯ ದೆಹಲಿಯ ಜಾಫರಾಬಾದ್‌ನಲ್ಲಿ ನಡೆದ ಹಿಂಸಾಚಾರದ ದೃಶ್ಯ
ಈಶಾನ್ಯ ದೆಹಲಿಯ ಜಾಫರಾಬಾದ್‌ನಲ್ಲಿ ನಡೆದ ಹಿಂಸಾಚಾರದ ದೃಶ್ಯ   

ನವದೆಹಲಿ: ಈಶಾನ್ಯ ದೆಹಲಿಯ ಜಾಫರಾಬಾದ್‌, ಭಜನ್‌ಪುರ್ ಮತ್ತು ಮೌಜ್‌ಪುರ್‌ ಪ್ರದೇಶಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ–ವಿರೋಧಿಗುಂಪುಗಳ ನಡುವಿನ ಘರ್ಷಣೆ ಎರಡನೇ ದಿನವೂ ಮುಂದುವರೆದದ್ದು, ಘಟನೆಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ಹತ್ಯೆಗೈಯಲಾಗಿದೆ.

ಮೌಜ್‌ಪುರ್‌ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಲ್ಲುತೂರಾಟದ ಸಂದರ್ಭ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಓರ್ವ ಡಿಸಿಪಿಗೆ ಗಾಯವಾಗಿದೆ. ಈ ಘಟನೆಯಿಂದ ಈಶಾನ್ಯ ದೆಹಲಿಯಲ್ಲಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸೆಕ್ಷನ್‌ 144 ಜಾರಿ ಮಾಡಲಾಗಿದೆ.

ಸೀಲಾಂಪುರ– ಮೌಜ್‌ಪುರ ಮತ್ತು ಯಮುನಾ ವಿಹಾರ್‌ಗೆ ಸಂಪರ್ಕ ಕಲ್ಪಿಸುವ ಜಾಫರಾಬಾದ್‌ ಮೆಟ್ರೊ ರೈಲು ನಿಲ್ದಾಣದ ಬಳಿ ಪ್ರತಿಭಟನಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಗೂ ಮುನ್ನನಡೆಯುತ್ತಿರುವ ಘಟನಾವಳಿಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ದೆಹಲಿಯ ಕೆಲ ಪ್ರದೇಶಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಕದಡುವ ಸುದ್ದಿಗಳು ತೀವ್ರ ಆತಂಕಕ್ಕೀಡು ಮಾಡಿವೆ. ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಕೇಂದ್ರ ಗೃಹ ಸಚಿವರು ಶಾಂತಿ ಮತ್ತು ಸಾಮರಸ್ಯ ನೆಲಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು‘ ಎಂದು ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದದ್ದು, ಹಿಂಸಾಚಾರ ನಿಯಂತ್ರಿಸಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

‌ಭಾನುವಾರ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದವು. ಗುಂಪುಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ ಪ್ರಯೋಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.