ADVERTISEMENT

ಜಂಗಲ್‌ ರಾಜ್‌ನ ಯುವರಾಜನ ಬಗ್ಗೆ ಎಚ್ಚರಿಕೆಯಿಂದಿರಿ: ನರೇಂದ್ರ ಮೋದಿ

ಭಗವಾನ್ ರಾಮ ಅಸ್ತಿತ್ವ ಪ್ರಶ್ನಿಸಿದವರನ್ನು ಮರೆಯದಿರಿ

ಪಿಟಿಐ
Published 1 ನವೆಂಬರ್ 2020, 16:09 IST
Last Updated 1 ನವೆಂಬರ್ 2020, 16:09 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಪಶ್ಚಿಮ ಚಂಪಾರಣ್ಯ(ಬಿಹಾರ): ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರನ್ನು ಮತ್ತು ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸಲು ಅಡೆತಡೆಗಳನ್ನು ಸೃಷ್ಟಿಸಿದವರನ್ನು ಜನರು ಮರೆಯಬಾರದು. ಜಂಗಲ್‌ರಾಜ್‌ನ ಯುವರಾಜನ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಪ್ರಚಾರದ ಕೊನೆಯ ದಿನದಂದು ಪಶ್ಚಿಮ ಚಂಪಾರನ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಹರಡುತ್ತಿವೆ ಎಂದು ಆರೋಪಿಸಿದರು.

ಜನರ ಸಹಕಾರದೊಂದಿಗೆ, ಅಯೋಧ್ಯೆಯಲ್ಲಿ ಭವ್ಯವಾದ ರಾಮ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ ಮತ್ತು ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ನಿರ್ಮಿಸುವಲ್ಲಿ ಅಡೆತಡೆಗಳನ್ನು ಸೃಷ್ಟಿಸಿದವರನ್ನು ನೀವು ಮರೆಯಬಾರದು ಎಂದಿದ್ದಾರೆ.

ADVERTISEMENT

ಎನ್‌‌ಡಿಎ ಸರ್ಕಾರವು ಎಸ್‌ಸಿ-ಎಸ್‌ಟಿ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂಬ ವದಂತಿಗಳನ್ನು ಅವರು ಹರಡಿದರು. ಆದರೆ, ಈ ಎನ್‌ಡಿಎ ಸರ್ಕಾರವೇ ಮೀಸಲಾತಿಯನ್ನು ಮುಂದಿನ 10 ವರ್ಷಗಳವರೆಗೆ ವಿಸ್ತರಿಸಿತು. ಅವರು ಎಂದಿಗೂ ಸಾಮಾನ್ಯ ವರ್ಗಕ್ಕೆ ಗಮನ ಕೊಡುವುದಿಲ್ಲ. ಸಾಮಾನ್ಯ ವರ್ಗದ ಬಡವರಿಗೆ ನಾವು ಶೇ 10 ರಷ್ಟು ಮೀಸಲಾತಿ ನೀಡಿದ್ದೇವೆ. ಎಲ್ಲರೂ ಅದನ್ನು ಒಪ್ಪಿಕೊಂಡರು ಮತ್ತು ಯಾವುದೇ ಅಸಮಾಧಾನ ಇರಲಿಲ್ಲ. ಏಕೆಂದರೆ ನಾವು ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್ ಮಂತ್ರದ ಜೊತೆಗೆ ವಾಸಿಸುತ್ತೇವೆ ಎಂದು ಹೇಳಿದರು.

ನಾವು 370ನೇ ವಿಧಿಯನ್ನು ರದ್ದುಪಡಿಸಿದಾಗ, ಕಾಶ್ಮೀರದಲ್ಲಿ ರಕ್ತಪಾತವಾಗಲಿದೆ ಮತ್ತು ಭಾರತ ಮತ್ತು ಕಾಶ್ಮೀರದ ನಡುವಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಅವರು ಹೇಳಿದರು. ಆದರೆ ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಶಾಂತಿಯೊಂದಿಗೆ ಅಭಿವೃದ್ಧಿಯ ಹಾದಿಯಲ್ಲಿದೆ. ಕಾಶ್ಮೀರದ ಜನರು ಭ್ರಷ್ಟರಿಗೆ ಪಾಠ ಕಲಿಸಲು ಕೇಳುತ್ತಿದ್ದಾರೆ. ಲೂಟಿ ಮಾಡಿದ ಎಲ್ಲಾ ಹಣವನ್ನು ಮರುಪಡೆಯಲು ಎಲ್ಲಾ ರೀತಿಯ ಕಾನೂನು ಆಯ್ಕೆಗಳನ್ನು ಬಳಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಾಗ, ಅನೇಕ ಭಾರತೀಯರು ತಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತಾರೆ ಎಂಬ ಸುಳ್ಳನ್ನು ಅವರು ಹರಡಿದರು. ಈಗ ಕಾಯ್ದೆ ಬಂದು ಒಂದು ವರ್ಷವಾಗಿದೆ, ಯಾವುದೇ ಭಾರತೀಯರು ತನ್ನ ಪೌರತ್ವವನ್ನು ಕಳೆದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಈಗ ಒಂದು ಕಡೆ ‘ಜಂಗಲ್ ರಾಜ್’ ಇದೆ. ಇದರಲ್ಲಿ ಕೋಟಿ ಮೌಲ್ಯದ ಹಗರಣಗಳು ನಡೆದಿವೆ ಮತ್ತು ಇನ್ನೊಂದು ಬಿಹಾರಕ್ಕೆ ಸೇವೆ ಸಲ್ಲಿಸಿದ ಎನ್‌ಡಿಎ ಇದೆ. ಒಂದು ಕಡೆ ಜಂಗಲ್ ರಾಜ್ ರಸ್ತೆಗಳನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಬಿಟ್ಟರೆ, ಇನ್ನೊಂದು ಕಡೆ ಎನ್‌ಡಿಎ ಬಿಹಾರದ ಸಂಪರ್ಕವನ್ನು ಸುಧಾರಿಸಿದೆ. ಒಂದು ಕಡೆ ಜಂಗಲ್ ರಾಜ್ ಬಡವರ ಹಣದಿಂದ ಹಗರಣಗಳನ್ನು ಮಾಡಿತು ಮತ್ತು ಇನ್ನೊಂದು ಕಡೆ ಎನ್‌ಡಿಎ ಹಣವನ್ನು ಬಡವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ ಎಂದು ತಿಳಿಸಿದರು.

ಜಂಗಲ್ ರಾಜ್ ಬಿಹಾರವನ್ನು ಮತ್ತೆ ಕತ್ತಲೆಗೆ ದೂಡಲು ಮುಂದಾದರೆ, ಎನ್‌ಡಿಎ ವಿದ್ಯುತ್ ಒದಗಿಸುವ ಮೂಲಕ ಬೆಳಕಿನೆಡೆಗೆ ತರುತ್ತಿದೆ. ಜಂಗಲ್ ರಾಜ್, ಮೂರು ದಶಕಗಳಿಂದ ಕೇವಲ 3 ವೈದ್ಯಕೀಯ ಕಾಲೇಜುಗಳೊಂದಿಗೆ ಬಿಹಾರವನ್ನು ನಡೆಸುತ್ತಿದೆ. ಇನ್ನೊಂದು ಕಡೆ ಎನ್‌ಡಿಎ ಪ್ರತಿ ಸಂಸದೀಯ ಕ್ಷೇತ್ರಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಕೆಲಸ ಮಾಡುತ್ತಿದೆ. ನೀವು ಜಂಗಲ್ ರಾಜ್ ಬಗ್ಗೆ ಬಹಳ ಜಾಗರೂಕರಾಗಿರಬೇಕು ಮತ್ತು ಜಂಗಲ್ ರಾಜ್‌ನ ಯುವರಾಜನ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.