ಕಂಗನಾ ರನೌತ್ –
ಪಿಟಿಐ ಚಿತ್ರ (ಸಂಗ್ರಹ ಚಿತ್ರ)
ನವದೆಹಲಿ: ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ಬಂಧನವನ್ನು ಖಂಡಿಸಿರುವ ನಟಿ, ಸಂಸದೆ ಕಂಗನಾ ರನೌತ್, ಪಶ್ಚಿಮ ಬಂಗಾಳವನ್ನು ಉತ್ತರ ಕೊರಿಯವನ್ನಾಗಿ ಮಾಡಬೇಡಿ ಎಂದಿದ್ದಾರೆ.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರನೌತ್, ಕಾನೂನಿನ ಹೆಸರಿನಲ್ಲಿ ಒಬ್ಬರಿಗೆ ಕಿರುಕುಳ ಕೊಡುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
‘ಕ್ಷಮೆ ಕೇಳಿ ಸಾಮಾಜಿಕ ಮಾಧ್ಯಮದಿಂದ ಪೋಸ್ಟ್ ಅಳಿಸಿ ಹಾಕಿದ ಮೇಲೂ ಆಕೆಯನ್ನು ಬಂಧಿಸಿ, ಹಿಂಸಿಸಿ, ಆಕೆಯ ಭವಿಷ್ಯವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
‘ಯಾವ ಹೆಣ್ಣಿಗೂ ಈ ಪರಿಸ್ಥಿತಿ ಬರಬಾರದು. ಪಶ್ಚಿಮ ಬಂಗಳಾವನ್ನು ಉತ್ತರ ಕೊರಿಯವನ್ನಾಗಿ ಮಾಡಬೇಡಿ ಎಂದು ನಾನು ಅಲ್ಲಿನ ಸರ್ಕಾರವನ್ನು ಒತ್ತಾಯಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ತಮ್ಮ ತಪ್ಪಿಗಾಗಿ ಅವರು ಕ್ಷಮೆ ಕೇಳಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಯಾವುದೇ ಉದ್ದೇಶವಿಲ್ಲದೇ ಆಕೆ ಆ ಪದಗಳನ್ನು ಬಳಸಿದ್ದು, ಇಂದಿನ ಪೀಳಿಗೆ ಅಂತಹ ಭಾಷೆಯನ್ನು ಸಾಮಾನ್ಯವಾಗಿ ಬಳಸುತ್ತವೆ. ತೀರಾ ಸಣ್ಣ ವಯಸ್ಸಿನ ಯುವತಿಯಾಗಿದ್ದರಿಂದ ಆಕೆಯನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಕರಣವೇನು?
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳ ಮೌನವನ್ನು ವಿಡಿಯೊವೊಂದರಲ್ಲಿ ಟೀಕಿಸಿದ್ದ ಶರ್ಮಿಷ್ಠ, ಇದೇ ವೇಳೆ ಇಸ್ಲಾಂ ಮತ್ತು ಪ್ರವಾದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.