ADVERTISEMENT

ಹಾಲಿ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯ: ಕರಡು ಮಸೂದೆಗಳಿಗೆ ಅನುಮೋದನೆ ಸಾಧ್ಯತೆ

ಪಿಟಿಐ
Published 5 ನವೆಂಬರ್ 2023, 16:26 IST
Last Updated 5 ನವೆಂಬರ್ 2023, 16:26 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಪ್ರಸ್ತುತ ಚಾಲ್ತಿಯಲ್ಲಿರುವ ಕ್ರಿಮಿನಲ್‌ ಕಾಯ್ದೆಗಳಿಗೆ ಪರ್ಯಾಯವಾಗಿ ಜಾರಿಗೆ ತರಲು ಉದ್ದೇಶಿಸಿರುವ  ಕಾಯ್ದೆಗಳ ಕರಡು ಮಸೂದೆಗಳಿಗೆ ಸಂಸತ್ತಿನ ಸಮಿತಿಯು ಸೋಮವಾರ (ನ.6) ಅನುಮೋದನೆ ನೀಡುವ ಸಂಭವವಿದೆ.

ಈ ಮಸೂದೆಗಳ ವಿಸ್ತೃತ ಪರಿಶೀಲನೆಗಾಗಿ ಕಾಲಾವಕಾಶ ನೀಡಬೇಕು ಎಂದು ವಿರೋಧಪಕ್ಷಗಳ ಕೆಲ ಸದಸ್ಯರು ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಿದ್ದರು. ಇದೇ ಕಾರಣದಿಂದ ಅ.27ರಂದು ನಡೆದಿದ್ದ ಸಭೆಯಲ್ಲಿ ಸಮಿತಿಯು ಅನುಮೋದನೆಯನ್ನು ಮುಂದೂಡಿತ್ತು.

ADVERTISEMENT

ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಲಾಲ್ ಅವರಿಗೆ ಪ್ರತಿಪಕ್ಷಗಳ ಕೆಲ ಸದಸ್ಯರು, ‘ಚುನಾವಣೆಯ ಅಲ್ಪಾವಧಿ ಲಾಭಕ್ಕಾಗಿ ಈ ಮಸೂದೆಗಳನ್ನು ಹೇರುವುದನ್ನು ಕೈಬಿಡಬೇಕು. ಅವಧಿಯನ್ನು ಮತ್ತೆ 3 ತಿಂಗಳು ವಿಸ್ತರಿಸಲು ಕೋರಬೇಕು’ ಎಂದು ಒತ್ತಾಯಿಸಿದ್ದರು.

‘ನಿರ್ಲಕ್ಷ್ಯಿತರಿಗೂ ನ್ಯಾಯ ಕಲ್ಪಿಸುವ ಸಮಗ್ರ ಕಾಯ್ದೆಗಳನ್ನು ರೂಪಿಸಬೇಕಿದೆ. ಹೀಗಾಗಿ, ನವೆಂಬರ್‌ನಲ್ಲಿ ಅಥವಾ ಮುಂದಿನ ಕೆಲ ದಿನಗಳು ಅಂತಿಮ ವರದಿಯನ್ನು ಅಂಗೀಕರಿಸಬಾರದು. ತರಾತುರಿಯಲ್ಲಿ ಅಂಗೀಕರಿಸಿದರೆ, ನಾವು ಈ ಮೂಲಕ ಶಾಸಕಾಂಗದ ಪರಿಶೀಲನಾ ಪ್ರಕ್ರಿಯೆಯನ್ನೇ ಅಣಕು ಮಾಡಿದಂತಾಗುತ್ತದೆ’ ಎಂದು ಪ್ರತಿಪಕ್ಷದ ಸಂಸದರೊಬ್ಬರು ಸಮಿತಿ ಅಧ್ಯಕ್ಷರಿಗೆ ತಿಳಿಸಿದ್ದರು.  

ಮೂಲಗಳ ಪ್ರಕಾರ, ಸಮಿತಿಯು ಮಸೂದೆಗಳನ್ನು ಕುರಿತು ವಿಸ್ತೃತ ಚರ್ಚೆ, ಸಂವಹನದಲ್ಲಿ ತೊಡಗಿದೆ. ಮೂರು ತಿಂಗಳ ನಿಗದಿತ ಗಡುವಿನೊಳಗೆ ಅನುಮೋದನೆ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಸಮಿತಿಯ ಮುಂದಿನ ಸಭೆ ನ.6ರ ಸೋಮವಾರ ನಡೆಯಲಿದ್ದು, ಈ ಸಂಬಂಧ ಸಮಿತಿಯ ಸದಸ್ಯರಾಗಿರುವ, ಪ್ರತಿಪಕ್ಷದ ಸಂಸದರಿಗೆ ನೋಟಿಸ್‌ ಕಳುಹಿಸಲಾಗಿದೆ.

ವಸಾಹತುಶಾಹಿ ಕಾಲದ ಕ್ರಿಮಿನಲ್ ಕಾಯ್ದೆಗಳ ಆಮೂಲಾಗ್ರ ಬದಲಾವಣೆಯನ್ನು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪರ್ಯಾಯವಾಗಿ ಮೂರು ಮಸೂದೆಗಳನ್ನು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮಂಡಿಸಿದ್ದರು.

‌ಭಾರತೀಯ ದಂಡಸಂಹಿತೆ (ಐಪಿಸಿ), ಕ್ರಿಮಿನಲ್‌ ಅಪರಾಧ ಸಂಹಿತೆ 1973 (ಸಿಆರ್‌ಪಿಸಿ), ಭಾರತೀಯ ಸಾಕ್ಷ್ಯ ಕಾಯ್ದೆ 1872ಕ್ಕೆ ಪರ್ಯಾಯವಾಗಿ ಜಾರಿಗೆ ತರಲು ಕ್ರಮವಾಗಿ ‘ಭಾರತೀಯ ನ್ಯಾಯಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ಗಳ ಕಾಯ್ದೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಮಸೂದೆಗಳನ್ನು ಮಂಡಿಸಿತ್ತು. 

ಸದನವು ಬಳಿಕ ಈ ಮಸೂದೆಗಳನ್ನು ಆಗಸ್ಟ್ 11ರಂದು ಸಂಸತ್ತಿನ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ಒಪ್ಪಿಸಿದ್ದು, ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ನಿಗದಿಪಡಿಸಿತ್ತು. 

ಮೂಲಗಳ ಪ್ರಕಾರ, ಸಮಿತಿಯು ಉಲ್ಲೇಖಿತ ಮೂರು ಮಸೂದೆಗಳಿಗೆ ಹಲವು ತಿದ್ದುಪಡಿಗಳನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ. ಆದರೆ, ಅವುಗಳ ಹಿಂದಿ ಹೆಸರನ್ನೇ ಉಳಿಸಿಕೊಳ್ಳುವುದು ಸ್ಪಷ್ಟವಾಗಿದೆ. ಡಿಎಂಕೆ ಸೇರಿದಂತೆ ಕೆಲವು ವಿರೋಧಪಕ್ಷಗಳು ಉಲ್ಲೇಖಿತ ಕಾಯ್ದೆಗಳಿಗೆ ಆಂಗ್ಲಭಾಷೆಯ ಹೆಸರು ನಿಗದಿಪಡಿಸಬೇಕು ಎಂದು ಆಗ್ರಹಪಡಿಸಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.