ಮಹೇಂದ್ರ ಪ್ರಸಾದ್
–ಎಎನ್‌ಐ ಟ್ವಿಟರ್ ಚಿತ್ರ
ಜೈಪುರ: ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅತಿಥಿ ಗೃಹದ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ಉತ್ತರಾಖಂಡದ ಅಲ್ಮೋರದ ನಿವಾಸಿ ಮಹೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ.
‘ಜೈಸಲ್ಮೇರ್‌ನ ಚಂದನ್ ನಗರದಲ್ಲಿರುವ ಡಿಆರ್‌ಡಿಒ ಅತಿಥಿ ಗೃಹದಲ್ಲಿ ಮಹೇಂದ್ರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಮವಾರ ಆತನನ್ನು ಬಂಧಿಸಲಾಗಿದೆ. ಮಂಗಳವಾರ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಶಿವಹರೆ ಹೇಳಿದ್ದಾರೆ.
ಆರೋಪಿಯು ಜೈಸಲ್ಮೇರ್‌ನಲ್ಲಿ ನಡೆಯುತ್ತಿದ್ದ ಕಾರ್ಯತಂತ್ರ ಯೋಜನೆಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಶಂಕೆ ವ್ಯಕ್ತವಾಗಿದೆ ಎಂದೂ ತಿಳಿಸಿದ್ದಾರೆ.
ಮಹೇಂದ್ರ ಪ್ರಸಾದ್ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ 1923ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು (ಬುಧವಾರ) ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈಸಲ್ಮೇರ್‌ನ ಪೋಖರಣ್‌ನಲ್ಲಿರುವ ಫೈರಿಂಗ್ ರೇಂಜ್ ಪ್ರದೇಶದಲ್ಲಿಯೇ ಡಿಆರ್‌ಡಿಒ ವಿವಿಧ ಕ್ಷಿಪಣಿಗಳು, ಶಸ್ತ್ರಾಸ್ತ್ರಗಳ ಪ್ರಯೋಗ ಮತ್ತು ಪರೀಕ್ಷೆಗಳನ್ನು ನಡೆಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದ ತಜ್ಞರು ಮತ್ತು ಅಧಿಕಾರಿಗಳು ಮಹೇಂದ್ರ ಮ್ಯಾನೇಜರ್ ಆಗಿದ್ದ ಅತಿಥಿ ಗೃಹಗಳಲ್ಲಿಯೇ ಉಳಿಯುತ್ತಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.