ADVERTISEMENT

ಬಿಜೆಪಿ ಮಾಜಿ ಶಾಸಕರ ಖಾತೆಯಿಂದ ₹30 ಲಕ್ಷ ಮೌಲ್ಯದ ಖರೀದಿ ಮಾಡಿದ್ದ ಚಾಲಕ ಬಂಧನ

ಪಿಟಿಐ
Published 1 ಮೇ 2022, 2:32 IST
Last Updated 1 ಮೇ 2022, 2:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾರಾಣಸಿ: ಚಾಲಕನಾಗಿದ್ದ ಆತ ಶಾಪಿಂಗ್ ಮಾಡುತ್ತಾ ತುಂಬಾ ಖುಷಿಯಾಗಿದ್ದ. ಆದರೆ, ಅವನ ಲಕ್ ಬದಲಾಗಿದ್ದು ಬಿಜೆಪಿಯ ಮಾಜಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ಅವರ ಖಾತೆಯಿಂದ ₹ 30 ಲಕ್ಷ ಮೌಲ್ಯದ ಖರೀದಿ ಮಾಡಿದ್ದ ಆರೋಪದಲ್ಲಿ ಸೈಬರ್ ಸೆಲ್ ಅಧಿಕಾರಿಗಳು ಬಂಧಿಸಿದಾಗ.

ಮಾಜಿ ಶಾಸಕರ ಚಾಲಕನಾಗಿ ಕೆಲಸ ಮಾಡುತ್ತಿದ್ದ ವಿವೇಕ್ ಸಿಂಗ್, 2019 ಮತ್ತು 2021ರ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್, ಗೃಹಬಳಕೆಯ ವಸ್ತುಗಳು, ಫ್ಯಾಷನ್ಸ್ ಮತ್ತು ಆಹಾರ ಪದಾರ್ಥಗಳನ್ನು ಖರೀದಿಸಿದ್ದರು.

ಸುರೇಂದ್ರ ನಾರಾಯಣ ಸಿಂಗ್ ಅವರು 2017 ರಿಂದ 2022ರವರೆಗೆ ಬಿಜೆಪಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಖಾತೆಯಿಂದ ಹಣ ವಿತ್‌ಡ್ರಾ ಆಗುತ್ತಿದೆ ಎಂದು ಸುರೇಂದ್ರ ಸಿಂಗ್ ಅವರು ಸೈಬರ್ ಕ್ರೈಮ್ ಘಟಕಕ್ಕೆ ದೂರು ನೀಡಿದ್ದರು.

ADVERTISEMENT

ಮಾಜಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ವಾರಾಣಸಿಯ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ವಿಸ್ತೃತ ತನಿಖೆ ಕೈಗೊಂಡರು. ಬಳಿಕ ಚಾಲಕ ವಿವೇಕ್‌ನನ್ನು ಬಂಧಿಸಲಾಯಿತು ಎಂದು ಐಜಿ ಶ್ರೇಣಿಯ ಕೆ.ಸತ್ಯ ನಾರಾಯಣ್ ತಿಳಿಸಿದರು.

ಸೈಬರ್ ಕ್ರೈಮ್ ಪೊಲೀಸರು ಬಂಧಿತನಿಂದ ಎರಡು ಸ್ಮಾರ್ಟ್ ಟಿವಿಗಳು, ಆಂಪ್ಲಿಫೈಯರ್‌ಗಳನ್ನು ಒಳಗೊಂಡಂತೆ ಡಿಜೆಗಾಗಿ ಎಲೆಕ್ಟಿಕಲ್ ಉಪಕರಣಗಳು, ಸೌಂಡ್ ಮಿಕ್ಸಿಂಗ್ ಮೆಷಿನ್‌ಗಳು, ಸ್ಟೆಬಿಲೈಜರ್, ಲೈಟ್ಸ್, ಲ್ಯಾಪ್ ಟಾಪ್, ಕೂಲರ್, ಇನ್ವರ್ಟರ್, ಬ್ಯಾಟರಿ ಮತ್ತು ಇತರೆ 8 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮೊದಲಿಗೆ ಮಿರ್ಜಾಪುರದ ಚುನಾರ್ ಪೊಲೀಸ್‌ ಸ್ಟೇಷನ್‌ನಲ್ಲಿ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ವಿವೇಕ್, ಬಳಿಕ ಶಾಸಕರ ಕಾರು ಚಾಲಕನಾಗಿ ತಿಂಗಳಿಗೆ 9 ಸಾವಿರ ಸಂಬಳಕ್ಕೆ 2018ರ ಫೆಬ್ರುವರಿಯಲ್ಲಿ ಸೇರಿಕೊಂಡ. ಹೀಗೆ ಕೆಲಸ ಮಾಡುತ್ತಲೇ ಶಾಸಕರ ಕುಟುಂಬದಲ್ಲಿ ಒಬ್ಬನಂತೆ ಆಗಿದ್ದಾಗಿ ವಿವೇಕ್ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ಸಿಂಗ್ ಅವರು ತಮ್ಮ ಬ್ಯಾಂಕ್ ಖಾತೆ ಮಾಹಿತಿ ಮತ್ತು ಮೊಬೈಲ್ ಫೋನ್ ಅನ್ನು ವಿವೇಕ್‌ಗೆ ನೀಡಿದ್ದಾರೆ. ಇದನ್ನ ಬಳಸಿಕೊಂಡು ವಿವೇಕ್, ಎಲ್ಲ ರೀತಿಯ ಹಣ ಪಾವತಿಯನ್ನು ನೋಡಿಕೊಳ್ಳುತ್ತಿದ್ದ.

2019ರಲ್ಲಿ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಾದ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದ ವಿವೇಕ್, ಶಾಸಕರ ಎಟಿಎಂ ಕಾರ್ಡ್ ಅನ್ನು ಬಳಸಿಕೊಂಡು ಅವುಗಳಿಂದ ಆನ್‌ಲೈನ್ ಖರೀದಿ ನಡೆಸಿದ್ದ. ಮೊಬೈಲ್‌ ಫೋನಿಗೆ ಬರುತ್ತಿದ್ದ ಒಟಿಪಿಗಳನ್ನು ಬಳಸಿಕೊಂಡು ಖರೀದಿಸಿದ್ದ ವಸ್ತುಗಳನ್ನು ತನ್ನ ವೈಯಕ್ತಿಕ ವಿಳಾಸಕ್ಕೆ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇದೇ ರೀತಿ 2021ರವರೆಗೂ ವಿವೇಕ್, ಶಾಸಕರ ಬ್ಯಾಂಕ್ ಖಾತೆಯಿಂದ ಸುಮಾರು ₹ 30 ಲಕ್ಷವನ್ನು ಬಳಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.