ADVERTISEMENT

5 ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಡಿಎಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 15:56 IST
Last Updated 22 ಜನವರಿ 2026, 15:56 IST
.
.   

ನವದೆಹಲಿ: ಕೇಂದ್ರ ಸರ್ಕಾರವು ಮೋಟಾರು ವಾಹನಗಳ ನಿಯಮವನ್ನು ಕಠಿಣಗೊಳಿಸಿದೆ.

ಒಂದು ವರ್ಷದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿ ಅಮಾನತುಗೊಳ್ಳಲಿದೆ.

ನೂತನ ತಿದ್ದುಪಡಿ ನಿಯಮದ ಪ್ರಕಾರ, ಸಕ್ಷಮ ಪ್ರಾಧಿಕಾರವಾದ ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಅಧಿಕಾರಿಗಳು ಚಾಲನಾ ಪರವಾನಗಿಯ ಅಮಾನತು ಅವಧಿಯನ್ನು ನಿರ್ಧರಿಸಲಿದ್ದಾರೆ.

ADVERTISEMENT

ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿ ಆದೇಶಿಸುವ ಮುನ್ನ ಚಾಲಕರ ಅಹವಾಲನ್ನೂ ಆಲಿಸಬೇಕು ಎಂದೂ ನೂತನ ನಿಯಮದಲ್ಲಿ ಹೇಳಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ಮಾಡಿ ಬುಧವಾರ ಸುತ್ತೋಲೆ ಹೊರಡಿಸಿದೆ. ನೂತನ ನಿಯಮಗಳು ಜನವರಿ 20ರಿಂದಲೇ ಅನುಷ್ಠಾನಗೊಳ್ಳಲಿವೆ. ಆದರೆ, ಜನವರಿ 1ರಿಂದ ಮಾಡಿರುವ ಸಂಚಾರ ನಿಯಮ ಉಲ್ಲಂಘನೆಯನ್ನು ಪರಿಗಣಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ

ಈ ಹಿಂದಿನ ವರ್ಷಗಳ ಸಂಚಾರ ನಿಯಮ ಉಲ್ಲಂಘನೆಯನ್ನು ಪರಿಗಣಿಸುವುದಿಲ್ಲ ಎಂದೂ ಸಚಿವಾಲಯವು ಸ್ಪಷ್ಟಪಡಿಸಿದೆ. ಸಂಚಾರ ನಿಯಮ ಉಲ್ಲಂಘನೆಯನ್ನೇ ರೂಢಿ ಮಾಡಿಕೊಂಡಿರುವವರ ನಿಯಂತ್ರಣಕ್ಕಾಗಿ ಮತ್ತು ರಸ್ತೆ ಸುರಕ್ಷತೆ ಉದ್ದೇಶದಿಂದ ನೂತನ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಅದು ತಿಳಿಸಿದೆ.

ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ ಅಥವಾ ರಾಜ್ಯ ಸರ್ಕಾರದ ಯಾವುದೇ ನಿಯುಕ್ತ ಅಧಿಕಾರಿ ಚಲನ್‌ ನೀಡಬಹುದು. ಇ–ಚಲನ್ ಕೂಡ ನೀಡಬಹುದು ಎಂದು ನೂತನ ನಿಯಮದಲ್ಲಿ ತಿಳಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದವರು 45 ದಿನಗಳ ಒಳಗಾಗಿ ದಂಡ ಪಾವತಿಸಬಹುದು ಅಥವಾ ಉಲ್ಲಂಘನೆ ಆರೋಪವು ದೋಷಪೂರಿತವಾಗಿದೆ ಎಂದು ಅರ್ಜಿ ಸಲ್ಲಿಸಬಹುದು. 45 ದಿನಗಳ ಒಳಗಾಗಿ ಅರ್ಜಿ ಸಲ್ಲಿಸದಿದ್ದಲ್ಲಿ ನಿಯಮ ಉಲ್ಲಂಘನೆಯನ್ನು ಒಪ್ಪಿಕೊಳ್ಳಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಏನೇನು ಬದಲಾವಣೆ?

* ಅಜಾಗರೂಕ ಚಾಲನೆ ಪ್ರಯಾಣಿಕರ ಮೇಲೆ ಹಲ್ಲೆ ಸೇರಿದಂತೆ ಅಧಿಸೂಚಿತ 24 ಸಂಚಾರ ನಿಯಮಗಳ ಉಲ್ಲಂಘನೆಯಾದಾಗ ಮಾತ್ರ ಪರವಾನಗಿ ಅಮಾನತು ಅಂತಹ ಶಿಸ್ತುಕ್ರಮ ಜರುಗಿಸಲು ಅವಕಾಶವಿತ್ತು

* ಇನ್ನು ಮುಂದೆ  ಹೆಲ್ಮೆಟ್‌ ಧರಿಸದೇ ಇರುವುದು ಸಿಗ್ನಲ್‌ ಜಂಪ್‌ ಸೀಟ್‌ ಬೆಲ್ಟ್‌ ಧರಿಸದೇ ಇರುವುದನ್ನೂ ಸಂಚಾರ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಶಿಸ್ತುಕ್ರಮ ಜರುಗಿಸಲಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.