ADVERTISEMENT

ಸೇನೆ ದಿನಾಚರಣೆಯಲ್ಲಿ ಗಮನ ಸೆಳೆದ ಡ್ರೋನ್‌ಗಳ ಕಸರತ್ತು

ಪಿಟಿಐ
Published 15 ಜನವರಿ 2021, 10:06 IST
Last Updated 15 ಜನವರಿ 2021, 10:06 IST
ಭಾರತೀಯ ಸೇನೆ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇನಾಪಡೆಯ ಡ್ರೋನ್‌ಗಳ ಕಸರತ್ತನ್ನು ಪ್ರದರ್ಶಿಸಲಾಯಿತು  –ಪಿಟಿಐ ಚಿತ್ರ
ಭಾರತೀಯ ಸೇನೆ ದಿನಾಚರಣೆ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇನಾಪಡೆಯ ಡ್ರೋನ್‌ಗಳ ಕಸರತ್ತನ್ನು ಪ್ರದರ್ಶಿಸಲಾಯಿತು  –ಪಿಟಿಐ ಚಿತ್ರ   

ನವದೆಹಲಿ: ಇಲ್ಲಿನ ಜನರಲ್‌ ಕಾರಿಯಪ್ಪ ಮೈದಾನದಲ್ಲಿ ಭಾರತೀಯ ಸೇನೆ ದಿನಾಚರಣೆ ಅಂಗವಾಗಿ ನಡೆದ ಪರೇಡ್‌ನಲ್ಲಿ ‍ಪ್ರದರ್ಶನಗೊಂಡ ಡ್ರೋನ್‌ ಕಾರ್ಯಾಚರಣೆಗಳು ಗಮನ ಸೆಳೆದವು.

ಶತ್ರು ಪಾಳೆಯದ ಮೇಲೆ ಆಕ್ರಮಣ ನಡೆಸಿ, ಬಾಂಬ್‌ ಸ್ಫೋಟಿಸುವುದು, ಗಾಯಗೊಂಡ ಯೋಧರಿಗೆ ಚಿಕಿತ್ಸೆ ನೀಡಲು ಔಷಧಿಗಳ ಸಾಗಣೆಯಂತಹ ಕಸರತ್ತುಗಳನ್ನು ಪ್ರದರ್ಶಿಸಲಾಯಿತು. ಡ್ರೋನ್‌ ಬಳಸಿ ನಡೆಸುವ ಕಾರ್ಯಾಚರಣೆಗಳನ್ನು ಇದೇ ಮೊದಲ ಬಾರಿಗೆ ಈ ದಿನಾಚರಣೆ ಪರೇಡ್‌ನಲ್ಲಿ ಪ್ರದರ್ಶಿಸಲಾಯಿತು.

ಯುದ್ಧವಿಮಾನ ವಿರೋಧಿ ವ್ಯವಸ್ಥೆ ‘ಸಚಿಲ್ಕಾ’, ಬ್ರಹ್ಮೋಸ್‌ ಕ್ಷಿಪಣಿಗಳು, ಯೋಧರು ಬಳಸುವ ವಾಹನಗಳಾದ ಬಿಎಂಪಿ–2, ಟಿ–72, ಬಹುಹಂತದ ರಾಕೆಟ್‌ ಉಡ್ಡಯನ ವ್ಯವಸ್ಥೆ ‘ಪಿನಾಕ’ ಹಾಗೂ ಸೇತುವೆ ನಿರ್ಮಾಣಕ್ಕೆ ಬಳಸುವ ಟ್ಯಾಂಕ್‌ಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ADVERTISEMENT

ವಿವಿಧ ಕಾರ್ಯಾಚರಣೆ ವೇಳೆ ಪರಾಕ್ರಮ ಪ್ರದರ್ಶಿಸಿದ ಯೋಧರಿಗೆ ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜ. ಬಿಪಿನ್‌ ರಾವತ್‌, ಏರ್‌ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌.ಭದೌರಿಯಾ, ನೌಕಾಪಡೆ ಮುಖ್ಯಸ್ಥ ಆಡ್ಮಿರಲ್‌ ಕರಂವೀರ್‌ ಸಿಂಗ್‌ ಹಾಜರಿದ್ದರು.

ಜನರಲ್‌ ಕೆ.ಎಂ.ಕಾರಿಯಪ್ಪ ಅವರು 1949ರ ಜ. 15ರಂದು ಭಾರತೀಯ ಸೇನೆಯ ಮೊದಲ ಕಮಾಂಡರ್‌ ಇನ್‌ ಚೀಫ್‌ ಆಗಿ ಅಧಿಕಾರ ಸ್ವೀಕರಿಸಿದರು. ಈ ಕಾರಣಕ್ಕಾಗಿ ಪ್ರತಿವರ್ಷ ಜ. 15ರಂದು ಸೇನೆ ದಿನವನ್ನು ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.