ADVERTISEMENT

ರಾಷ್ಟ್ರಪತಿ ಚುನಾವಣೆ: ಮೊಬೈಲ್ ಕರೆ ಸ್ವೀಕರಿಸದೇ ಫಜೀತಿ ತಂದಿಟ್ಟಿದ್ದ ದ್ರೌಪದಿ ಮುರ್ಮು!

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಮಾಹಿತಿ ನೀಡಲು ಮಾಡಿದ್ದ ಕರೆ

ಪಿಟಿಐ
Published 25 ಜೂನ್ 2023, 13:26 IST
Last Updated 25 ಜೂನ್ 2023, 13:26 IST
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು   

ನವದೆಹಲಿ: ರಾಷ್ಟ್ರಪತಿ ಹುದ್ದೆಗೇರುವುದಕ್ಕೂ ಮುನ್ನ ದ್ರೌಪದಿ ಮುರ್ಮು ಅವರು ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಈ ಕಾರಣಕ್ಕಾಗಿ, ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಂತೆ ಮಾಹಿತಿ ನೀಡಲು ಮಾಡಿದ್ದ ಕರೆಯನ್ನು ಅವರು ಸ್ವೀಕರಿಸಿರಲಿಲ್ಲ. ಕೊನೆಗೆ, ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಬಂದಿದ್ದನ್ನು ಅವರ ಮಾಜಿ ವಿಶೇಷ ಕರ್ತವ್ಯ ಅಧಿಕಾರಿಯೇ ಖುದ್ದಾಗಿ ಹೋಗಿ ತಿಳಿಸಿದ್ದರು.

ಈ ಘಟನೆ ನಡೆದದ್ದು ಕಳೆದ ವರ್ಷ ಜೂನ್‌ 21ರಂದು. ಪ್ರಧಾನ ಮಂತ್ರಿಗಳ ಕಚೇರಿಯಿಂದ (ಪಿಎಂಒ) ಕರೆ ಬಂದಿರುವ ವಿಚಾರವನ್ನು ಮುರ್ಮು ಅವರಿಗೆ ತಿಳಿಸಿದ್ದು ಜಾರ್ಖಂಡದಲ್ಲಿ ಆಗ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ವಿಕಾಸಚಂದ್ರ ಮೊಹಂತೊ.

ಈ ಕುತೂಹಲಕಾರಿ ಘಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜೀವನಚರಿತ್ರೆ ‘ದ್ರೌಪದಿ ಮುರ್ಮು: ಫ್ರಂ ಟ್ರೈಬಲ್ ಹಿಂಟರ್‌ಲ್ಯಾಂಡ್ಸ್‌ ಟು ರೈಸಿನಾ ಹಿಲ್’ ಕೃತಿಯಲ್ಲಿ ದಾಖಲಿಸಲಾಗಿದೆ.

ADVERTISEMENT

ಪತ್ರಕರ್ತ ಕಸ್ತೂರಿ ರೇ ಅವರು ಬರೆದಿರುವ ಈ ಕೃತಿಯನ್ನು ರೂಪ ಪಬ್ಲಿಕೇಷನ್ಸ್‌ ಪ್ರಕಟಿಸಿದೆ.

‘ಕಳೆದ ವರ್ಷ ಜೂನ್‌ನಲ್ಲಿ ಮುರ್ಮು ಅವರು ಒಡಿಶಾ ರಾಜಧಾನಿ ಭುವನೇಶ್ವರದಿಂದ 275 ಕಿ.ಮೀ. ದೂರದಲ್ಲಿರುವ ರಾಯರಂಗಪುರದಲ್ಲಿದ್ದರು. ಬಿಜೆಪಿಯು ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ  ಅಭ್ಯರ್ಥಿಯನ್ನು ಘೋಷಿಸಬೇಕಿತ್ತು. ಎಲ್ಲರೂ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದರು’.

‘ವಿದ್ಯುತ್‌ ನಿಲುಗಡೆ ಕಾರಣ ಮುರ್ಮು ಹಾಗೂ ಅವರ ಕುಟುಂಬ ಸದಸ್ಯರು ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿ ನೋಡಲು ಆಗಿರಲಿಲ್ಲ. ತಮ್ಮನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಲಾಗುತ್ತದೆ ಎಂದುಕೊಂಡಿರಲಿಲ್ಲ. ಆದರೆ, ಕೆಲವೇ ಹೊತ್ತಿನಲ್ಲಿ ಎಲ್ಲ ಸುದ್ದಿವಾಹಿನಿಗಳಲ್ಲಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದ ಸುದ್ದಿ ಬಿತ್ತರವಾಗಿತ್ತು’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

‘ಮುರ್ಮು ಅವರು ಕರೆಯನ್ನು ಸ್ವೀಕರಿಸದಿದ್ದಾಗ, ಪಿಎಂಒ ದಿಂದ ಮೊಹಂತೊ ಅವರಿಗೆ ಕರೆ ಬಂತು. ಆಗ ಅವರು, ಮೊಬೈಲ್‌ ಫೋನ್‌ನೊಂದಿಗೆ ಮುರ್ಮು ಅವರ ನಿವಾಸದತ್ತ ಓಡಿಬಂದು, ಇಡೀ ವಿಷಯವನ್ನು ತಿಳಿಸಿದರು’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಮೊಹಂತೊ ಅವರು ರಾಯರಂಗಪುರದಲ್ಲಿ ಔಷಧ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ ಪ್ರಧಾನ ಮಂತ್ರಿ ಕಚೇರಿಯಿಂದ ಕರೆ ಬಂದ ತಕ್ಷಣ, ಗಡಿಬಿಡಿಯಿಂದ ಅಂಗಡಿಯನ್ನು ಬಂದ್ ಮಾಡಿ, ಮುರ್ಮು ಅವರ ನಿವಾಸಕ್ಕೆ ತೆರಳಿದ್ದರು ಎಂದೂ ಈ ಕೃತಿಯಲ್ಲಿ ಹೇಳಲಾಗಿದೆ.

ಜೂನ್‌ 22ರಂದು ನಾಮಪತ್ರ ಸಲ್ಲಿಸಿದ್ದ ಮುರ್ಮು, ಚುನಾವಣೆ ಮುಗಿದ ನಂತರ ಜೂನ್‌ 25ರಂದು ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.