ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಶಿಕ್ಷಕರ ಪುರಸ್ಕಾರ–2025’ ಸಮಾರಂಭದಲ್ಲಿ ಮುರ್ಮು ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು
–ಪಿಟಿಐ ಚಿತ್ರ
ನವದೆಹಲಿ: ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸ್ಮಾರ್ಟ್ ಬ್ಲ್ಯಾಕ್‌ಬೋರ್ಡ್, ಸ್ಮಾರ್ಟ್ ತರಗತಿ ಮತ್ತಿತರ ಆಧುನಿಕ ಸೌಲಭ್ಯಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಆದರೆ ಸ್ಮಾರ್ಟ್ ಶಿಕ್ಷಕರು ಅದೆಲ್ಲಕ್ಕಿಂತ ಮುಖ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಅಭಿಪ್ರಾಯಪಟ್ಟರು.
ತಾವು ಶಿಕ್ಷಕಿಯಾಗಿದ್ದ ಅವಧಿಯನ್ನು ಸ್ಮರಿಸಿದ ಅವರು, ‘ಅದು ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಸಮಯ’ ಎಂದು ವರ್ಣಿಸಿದರು.
ವಿಜ್ಞಾನ ಭವನದಲ್ಲಿ ನಡೆದ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುರ್ಮು ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ಅವರು, ‘ಸ್ಮಾರ್ಟ್ ಶಿಕ್ಷಕರು ವಿದ್ಯಾರ್ಥಿಗಳ ಉನ್ನತಿಗೆ ಏನು ಅಗತ್ಯವಿದೆ ಎಂದು ತಿಳಿದುಕೊಂಡಿರುತ್ತಾರೆ. ಪ್ರೀತಿ ಮತ್ತು ಸಂವೇದನಾಶೀಲತೆಯಿಂದ ಪರಿಣಾಮಕಾರಿಯಾಗಿ ಮಕ್ಕಳಿಗೆ ಕಲಿಸುತ್ತಾರೆ. ಸಮಾಜ ಮತ್ತು ರಾಷ್ಟ್ರದ ಅಗತ್ಯಕ್ಕೆ ತಕ್ಕಂತಹ ವಿದ್ಯಾರ್ಥಿಗಳನ್ನು ರೂಪಿಸುತ್ತಾರೆ’ ಎಂದು ಹೇಳಿದರು.
ಮುರ್ಮು ಹೇಳಿದ್ದು...
ಕೇವಲ ಸ್ಪರ್ಧೆ, ಪುಸ್ತಕ ಜ್ಞಾನದಲ್ಲಿ ಆಸಕ್ತಿ ಹೊಂದಿರುವ ಮತ್ತು ಸ್ವಾರ್ಥ ಇರುವ ವಿದ್ಯಾರ್ಥಿಗಳಿಗಿಂತ ಸಂವೇದನಾಶೀಲ, ಜವಾಬ್ದಾರಿಯುತ ಮತ್ತು ಸಮರ್ಪಣಾ ಭಾವವಿರುವ ವಿದ್ಯಾರ್ಥಿಗಳೇ ಉತ್ತಮ
ಬಡತನದ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಪ್ರಗತಿಯ ಉತ್ತುಂಗಕ್ಕೆ ಏರಬಹುದು
ಅಕ್ಷರ ಕಲಿಸಿದ ಶಿಕ್ಷಕರನ್ನು ಜೀವನದುದ್ದಕ್ಕೂ ಸ್ಮರಿಸುವುದೇ ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ಬಹುದೊಡ್ಡ ಕೊಡುಗೆ
ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರ್ ದೇಶವನ್ನಾಗಿಸುವ ಗುರಿ ಹೊಂದಿದೆ
ಆಂಧ್ರದ ಮೈಲವರಂ ಡಾ. ಲಕಿರೆಡ್ಡಿ ಹನಿಮಿರೆಡ್ಡಿ ಸರ್ಕಾರಿ ಪದವಿ ಕಾಲೇಜಿನ ತೆಲುಗು ವಿಭಾಗದ ಎಂ. ದೇವಾನಂದ ಕುಮಾರ್ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರು. ತಮ್ಮ ನವೀನ ಬೋಧನಾ ಕ್ರಮಕ್ಕಾಗಿ ಅವರಿಗೆ ಪ್ರಶಸ್ತಿ ಲಭಿಸಿದೆ.
ದೇವಾನಂದ ಅವರು ತಾಳೆ ಗರಿ ಬಳಸಿ ಹಸ್ತಪ್ರತಿ ರಚಿಸಿದ್ದಾರೆ ಮತ್ತು ಕಲಿಕೆ ನಿರ್ವಹಣಾ ವ್ಯವಸ್ಥೆಗಾಗಿ (ಎಲ್‌ಎಂಸಿ) ಶೈಕ್ಷಣಿಕ ವಿಡಿಯೊಗಳನ್ನು ಮಾಡಿದ್ದಾರೆ.
ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರೊಶಾಂತೋ ಕೆ.ಆರ್. ಸಹಾ ಅವರಿಗೂ ಈ ಪ್ರಶಸ್ತಿ ದೊರೆತಿದೆ. ವಿಧಿವಿಜ್ಞಾನ ಮನೋವಿಜ್ಞಾನ ಮತ್ತು ನರವಿಜ್ಞಾನದಲ್ಲಿ ಪರಿಣತಿ ಹೊಂದಿರುವ ಅವರು 14 ವರ್ಷಗಳಿಗೂ ಹೆಚ್ಚು ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನರವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿದ್ದಾರೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಬೆಂಬಲ ನೀಡಿದ್ದಾರೆ.
ಪ್ರಶಸ್ತಿ ಪ್ರದಾನಕ್ಕಿಂತ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪುರಸ್ಕೃತ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.