
ನವದೆಹಲಿ: ನಿರ್ದಿಷ್ಟ ವೈದ್ಯಕೀಯ ಪ್ರಕರಣಗಳಲ್ಲಿ ಔಷಧಗಳ ಜಾಹೀರಾತುಗಳನ್ನು ನಿಯಂತ್ರಿಸುವ 1954ರ ಕಾನೂನಿನ ಷೆಡ್ಯೂಲ್ ಬಗ್ಗೆ ಆತಂಕ ವ್ಯಕ್ತಪಡಿಸಿ, ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪರಿಶೀಲಿಸಿ, ಸುಧಾರಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ನಿತಿನ್ ಉಪಾಧ್ಯಾಯ ಎಂಬುವರು ಸಲ್ಲಿಸಿರುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆಯುಷ್ ವೈದ್ಯರನ್ನೂ ಔಷಧಗಳು ಮತ್ತು ‘ಮಾಂತ್ರಿಕ ಪರಿಹಾರಗಳ’ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ– 1954ರ ಸೆಕ್ಷನ್ 2(ಸಿಸಿ) ಅಡಿಯಲ್ಲಿ ತಂದು, ‘ನೋಂದಾಯಿತ ವೈದ್ಯಕೀಯ ವೈದ್ಯರು’ ಎಂದು ಘೋಷಿಸಲು ಕೇಂದ್ರಕ್ಕೆ ಸೂಚಿಸುವಂತೆ ಕೋರಲಾಗಿದೆ.
ಕೆಲವೊಂದು ಪ್ರಕರಣಗಳಲ್ಲಿ ಮಾಂತ್ರಿಕ ಗುಣಗಳನ್ನು (ಆಕ್ಷೇಪಾರ್ಹ) ವ್ಯಕ್ತಪಡಿಸುವ ಪರಿಹಾರ ಔಷಧಗಳ ಜಾಹೀರಾತುಗಳನ್ನು ನಿಷೇಧಿಸುವ, ನಿರ್ಬಂಧಿಸುವ ಉದ್ದೇಶ 1954ರ ಕಾಯ್ದೆಯಲ್ಲಿದೆ. 2(ಸಿಸಿ) ಸೆಕ್ಷನ್ ನೋಂದಾಯಿತ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ್ದಾಗಿದೆ.
ಆಯುಷ್ ವೈದ್ಯರು ಮತ್ತು ಕೆಲವು ಅಲೋಪಥಿ ಅಧ್ಯಯನ ಮಾಡದ ನೋಂದಾಯಿತ ವೈದ್ಯರು ಕಾಯ್ದೆಯ 14ನೇ ಸೆಕ್ಷನ್‌ನ ವಿನಾಯಿತಿ ಅಡಿ ಬರುವುದಿಲ್ಲ. ಇದು ಗಂಭೀರ ಸ್ವರೂಪದ ಕಾಯಿಲೆಗಳಿಗೆ ಸಂಬಂಧಿಸಿದ ಔಷಧೋಪಚಾರ ಕುರಿತ ಜಾಹೀರಾತುಗಳನ್ನು ತಡೆಯುತ್ತದೆ. ಔಷಧದ ಕುರಿತಾದ ಸಾರ್ವಜನಿಕ ಮೌಢ್ಯ ವ್ಯಾಪಿಸಲು ಸಹಕರಿಸುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾದಿ ತಪ್ಪಿಸುವ ಜಾಹೀರಾತುಗಳನ್ನು ಮತ್ತು ನಂಬಿಕಾರ್ಹ, ವೈಜ್ಞಾನಿಕ ಹಾಗೂ ಕಾನೂನುಬದ್ಧ ಮಾಹಿತಿಯ ಜಾಹೀರಾತುಗಳನ್ನು ಬೇರ್ಪಡಿಸಿ ನೋಡುವ ಅವಕಾಶ ಸೆಕ್ಷನ್–3ರಲ್ಲಿ ಇಲ್ಲ. ಇದು ಅಲೋಪಥಿ ಅಭ್ಯಾಸ ಮಾಡದ ಆಯುಷ್ ವೈದ್ಯರು ನೀಡುವ ನಂಬಿಕೆಗೆ ಅರ್ಹವಾದ ಜಾಹೀರಾತುಗಳನ್ನೂ ನಿಷೇಧಿಸುವಂತೆ ಮಾಡುತ್ತದೆ.
ಔಷಧ ಮತ್ತು ಪರಿಹಾರ ಕುರಿತ ಜಾಹೀರಾತುಗಳು ಸತ್ಯವಾಗಿದ್ದರೆ, ವೈಜ್ಞಾನಿಕವಾಗಿದ್ದರೆ, ಮೋಸದ ಉದ್ದೇಶ ಇಲ್ಲದಿದ್ದರೆ, ಗ್ರಾಹಕ ಮತ್ತು ರೋಗಿಗೆ ಕಾನೂನುಬದ್ಧ ಮಾಹಿತಿ ಒದಗಿಸುವಂತಿದ್ದರೆ ಅವುಗಳನ್ನು ಪರಿಶೀಲಿಸಿ, ಔಷಧಗಳು ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ–1954 ಅನ್ನು ನವೀಕರಿಸಲು ಸಮಿತಿಯ ಅಗತ್ಯವಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.