ಮಮತಾ ಬ್ಯಾನರ್ಜಿ
– ಪಿಟಿಐ ಚಿತ್ರ
ಕೋಲ್ಕತ್ತ: ದುರ್ಗಾಪುರದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಂದೆ ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷಮೆಯಾಚಿಸಿದ್ದಾರೆ.
‘ಮಮತಾ ನಮಗೆ ತಾಯಿಯಂತೆ. ನಿಮ್ಮ ವಿರುದ್ಧ ನಾನು ಏನಾದರೂ ತಪ್ಪು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ’ ಎಂದಿರುವ ಅವರು, ‘ನಮ್ಮ ಪುತ್ರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮಮತಾ ಅವರ ಬಳಿ ಮನವಿ ಮಾಡಿದ್ದಾರೆ.
‘ನಾನು ಅವರ ಪಾದಗಳಿಗೆ ಸಹಸ್ರ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಹಾಗೂ ನನ್ನ ಮಗಳಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ’ ಎಂದು ಅವರು ಬುಧವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಮಹಿಳೆಯರು ರಾತ್ರಿ ವೇಳೆ ಹೊರಗೆ ಹೋಗಬಾರದು’ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಸಂತ್ರಸ್ತೆಯ ತಂದೆ ಟೀಕಿಸಿದ್ದರು. ‘ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತವಲ್ಲ. ಅಲ್ಲಿ ಔರಂಗಜೇಬನ ಆಡಳಿತವಿದೆ. ನಾನು ಮಗಳನ್ನು ಅಲ್ಲಿಂದ ಒಡಿಶಾಗೆ ಮರಳಿ ಕರೆತರುತ್ತೇನೆ. ಅವಳ ಜೀವ ನಮಗೆ ಮುಖ್ಯ, ಆ ನಂತರ ಉದ್ಯೋಗ’ ಎಂದು ಅವರು ಸೋಮವಾರ ಹೇಳಿದ್ದರು.
‘ವೈದ್ಯರು ಹೇಳಿದ ಮೇಲಷ್ಟೇ ನಾನು ಮಗಳನ್ನು ಕರೆತರುತ್ತೇನೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಆದರೆ, ಈ ನಿರ್ಧಾರ ತೆಗೆದುಕೊಳ್ಳುವುದು ಅಲ್ಲಿನ ಆಡಳಿತ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.