ADVERTISEMENT

ಆಮ್ಲಜನಕ ಪೂರೈಕೆ ಕೊರತೆ ಪ್ರಕರಣದ ತನಿಖೆ ಕೋರಿದ್ದ ಪಿಐಎಲ್‌ ವಜಾ

ಬಿಕ್ಕಟ್ಟು ನಿಭಾಯಿಸುತ್ತಿರುವ ಅಧಿಕಾರಿಗಳ ಸ್ಥೈರ್ಯ ಕುಗ್ಗಿಸಬಾರದು: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:15 IST
Last Updated 4 ಅಕ್ಟೋಬರ್ 2021, 16:15 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ (ಪಿಟಿಐ): ‘ನೀವು ಹಾಟ್ ಸೀಟಿನಲ್ಲಿ ಇಲ್ಲದಿದ್ದರೆ ಸರ್ಕಾರ ಅಥವಾ ನ್ಯಾಯಾಲಯಗಳನ್ನು ಟೀಕಿಸುವುದು ತುಂಬಾ ಸುಲಭ. ಆದರೆ ವಿಶ್ವದ ಕೆಲವು ಮುಂದುವರಿದ ರಾಷ್ಟ್ರಗಳು ಕೂಡ ಕೋವಿಡ್ -19 ಸಾಂಕ್ರಾಮಿಕ ರೋಗದ ವೇಳೆ ಕಷ್ಟಗಳನ್ನು ಎದುರಿಸಬೇಕಾಯಿತು’ ಎಂದು ಸುಪ್ರೀಂ ಕೋರ್ಟ್, ಎರಡನೇ ಅಲೆಯ ವೇಳೆ ಆಮ್ಲಜನಕದ ಪೂರೈಕೆ ಕೊರತೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿದಾರರಿಗೆ ಸೋಮವಾರ ಹೇಳಿದೆ.

ಈ ವರ್ಷದ ಮಾರ್ಚ್‌ನಿಂದ ಮೇ ವರೆಗೆ ಕೊರೊನಾ ಎರಡನೇ ಅಲೆಯ ವೇಳೆ ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಪೂರೈಸದಿರುವುದು ಮತ್ತು ಆಮ್ಲಜನಕದ ಅಲಭ್ಯತೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಅಥವಾ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ಸ್ಥಾಪಿಸಬೇಕು ಎಂದು ಕೋರಿರುವ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನರೇಶ್ ಕುಮಾರ್‌ ಎಂಬುವವರು ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ‘ದೇಶವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಯಾರೂ ಮಾಡಬಾರದು’ ಎಂದು ತಾಕೀತು ಮಾಡಿದೆ.

ADVERTISEMENT

ನರೇಶ್‌ ಕುಮಾರ್ ಪರವಾಗಿ ವಾದಿಸಿದ ವಕೀಲ ಮೇಧಾಂಶು ತ್ರಿಪಾಠಿ, ಆಮ್ಲಜನಕದ ಕೊರತೆಯಿಂದಾಗಿ ಎರಡನೇ ಅಲೆಯ ವೇಳೆ ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಾದಿಸಿದರು.

‘ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅವರಿಗೂ ಸಹ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನೀವು ಹಾಟ್ ಸೀಟಿನಲ್ಲಿ ಇಲ್ಲದಿದ್ದರೆ ಸರ್ಕಾರವನ್ನು ಅಥವಾ ನ್ಯಾಯಾಲಯಗಳನ್ನು ಟೀಕಿಸುವುದು ತುಂಬಾ ಸುಲಭ’ ಎಂದು ಪೀಠ, ಅರ್ಜಿದಾರರ ಮೇಲೆ ಅಸಮಾಧಾನ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.