ADVERTISEMENT

ಪಟ್ನಾ | ಇಬಿಸಿ ದೌರ್ಜನ್ಯ ತಡೆ ಕಾಯ್ದೆ: ರಾಹುಲ್‌ ಭರವಸೆ

ಪಿಟಿಐ
Published 24 ಸೆಪ್ಟೆಂಬರ್ 2025, 16:03 IST
Last Updated 24 ಸೆಪ್ಟೆಂಬರ್ 2025, 16:03 IST
   

ಪಟ್ನಾ: ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಂತೆಯೇ ಅತಿ ಹಿಂದುಳಿದ ವರ್ಗಗಳ (ಇಬಿಸಿ) ಜನರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರೂಪಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬುಧವಾರ ಭರವಸೆ ನೀಡಿದರು.

ಅತ್ಯಂತ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮಾವೇಶದಲ್ಲಿ ಮಾತನಾಡಿದ ಅವರು ಇಬಿಸಿಗಳ ಏಳಿಗೆಗಾಗಿ 10 ಸಂಕಲ್ಪಗಳನ್ನು ಕೈಗೊಂಡಿರುವುದಾಗಿ ಹೇಳಿದರು.   ನಿತೀಶ್‌ ಕುಮಾರ್‌ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಶೇ 36ರಷ್ಟು ಇಬಿಸಿಗಳು ಇದ್ದಾರೆ.   ‘ಇಬಿಸಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ ಜಾರಿಗೊಳಿಸಲಾಗುವುದು. ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿಗಳಲ್ಲಿ ಇಬಿಸಿಗಳಿಗೆ ಹಾಲಿ ಚಾಲ್ತಿಯಿರುವ ಶೇ 20ರ ಮೀಸಲಾತಿ ಪ್ರಮಾಣವನ್ನು ಶೇ 30ಕ್ಕೆ ಏರಿಸಲಾಗುವುದು ಎಂದು ರಾಹುಲ್‌ ತಿಳಿಸಿದರು.

ಎಸ್‌ಸಿ ಎಸ್‌ಟಿ ಒಬಿಸಿ ಮತ್ತು ಇಬಿಸಿಗಳಿಗೆ ರಾಜ್ಯದಲ್ಲಿನ ₹ 25 ಕೋಟಿಗೂ ಹೆಚ್ಚು ಮೊತ್ತದ ಗುತ್ತಿಗೆಗಳಲ್ಲಿ ಶೇ 50ರಷ್ಟು ಮೀಸಲಾತಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಭೂ ರಹಿತರಿಗೆ ನಗರ ಪ್ರದೇಶಗಳಲ್ಲಿ ಮೂರು ಡೆಸಿಮಲ್‌ ಮತ್ತು ಗ್ರಾಮೀಣ ಭಾಗದಲ್ಲಿ ಐದು ಡೆಸಿಮಲ್‌ನಷ್ಟು ಜಮೀನು ನೀಡಲಾಗುವುದು ಎಂದು ಘೋಷಿಸಿದರು. ಶೇ 50ರಷ್ಟು ಮೀಸಲಾತಿ ಮಿತಿಯನ್ನು ರದ್ದುಪಡಿಸುವುದು ಮೀಸಲಾತಿ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಸೇರಿ ಹಲವು ಭರವಸೆಗಳನ್ನು ಅವರು ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.