ADVERTISEMENT

ಚುನಾವಣಾ ಪ್ರಚಾರಕ್ಕೆ ಯೋಧರ, ರಕ್ಷಣಾ ಪಡೆಗಳ ಚಿತ್ರ ಬಳಸುವಂತಿಲ್ಲ: ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2019, 5:10 IST
Last Updated 10 ಮಾರ್ಚ್ 2019, 5:10 IST
   

ನವ ದೆಹಲಿ:ಲೋಕಸಭೆ ಚುನಾವಣೆಗೆ ದೇಶದಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಫಲಕಗಳು ಹಾಗೂ ಫ್ಲೆಕ್ಸ್‌ಗಳಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಚಿತ್ರಗಳನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಶನಿವಾರ ಆದೇಶ ಹೊರಡಿಸಿದೆ.

ದೇಶದ ರಕ್ಷಣಾ ಪಡೆ ‘ಆಧುನಿಕ ಪ್ರಜಾಪ್ರಭುತ್ವದಲ್ಲಿ ರಾಜಕೀಯದಲ್ಲಿ ಆಸಕ್ತಿಯಿಲ್ಲದ ಮತ್ತು ತಟಸ್ಥ ಪಾಲುದಾರ’ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ದೆಹಲಿಯಲ್ಲಿ ಬಿಜೆಪಿಯ ಕೆಲ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಚಿತ್ರಗಳ ಜತೆಗೆ ವಿಂಗ್ ಕಮಾಂಡರ್‌ ಅಭಿನಂದನ್ ಅವರ ಮತ್ತು ವಾಯುಪಡೆಯ ಚಿತ್ರಗಳನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ಹಾಕಿದ್ದರು. ಜತೆಗೆ, ಮೋದಿ ಅವರ ಪ್ರಯತ್ನದ ಫಲವಾಗಿ ಐಎಎಫ್ ಪೈಲಟ್ ಬಿಡುಗಡೆಯಾಗಿದೆ ಎಂದೂ ಫ್ಲೆಕ್ಸ್‌ಗಳಲ್ಲಿ ಮುದ್ರಿಸಲಾಗಿತ್ತು.

ADVERTISEMENT

ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರುಗಳು ಬಂದ ಬಳಿಕ, ಆಯೋಗ ಎಲ್ಲಾ ರಾಜಕೀಯ ಪಕ್ಷಗಳಿಗೆ ನೋಟಿಸ್‌ ನೀಡಿದೆ.

2013ರ ಡಿಸೆಂಬರ್‌ 4ರ ಪತ್ರವೊಂದನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ, ಚುನಾವಣಾ ಕಾರ್ಯಗಳಿಗೆ ರಕ್ಷಣಾ ಪಡೆಗಳನ್ನು ಬಳಸದಿರುವ ಕುರಿತು ಕಾರಣಗಳನ್ನು ನೀಡಿ, ಪತ್ರದಲ್ಲಿನ ಅಂಶಗಳನ್ನು ವಿವರಿಸಿದೆ. ’ರಾಷ್ಟ್ರದ ಸಶಸ್ತ್ರ ಪಡೆಗಳು ಅದರ ಗಡಿ, ಭದ್ರತೆ ಮತ್ತು ರಾಜಕೀಯ ವ್ಯವಸ್ಥೆಯ ರಕ್ಷಕರಾಗಿದ್ದು, ಅವು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಾಜಕೀಯ(ರಾಜಕೀಯದಲ್ಲಿ ಆಸಕ್ತಿಯಿಲ್ಲದ) ಮತ್ತು ತಟಸ್ಥ ಪಾಲುದಾರರು’ ಎಂದು ನಮೂದಿಸಿದ್ದು, ‘ಸಂಬಂಧಪಟ್ಟ ರಾಜಕೀಯ ಪಕ್ಷಗಳು ಮತ್ತು ನಾಯಕರು ರಕ್ಷಣಾ ಪಡೆಗಳ ಕುರಿತು ಯಾವುದೇ ಉಲ್ಲೇಖಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದಿರುವುದು ಅವಶ್ಯಕವಾಗಿದೆ’ ಎಂದು ಹೇಳಿದೆ.

ಫ್ಲೆಕ್ಸ್‌ ಮತ್ತು ಪ್ರಚಾರ ಫಲಕಗಳಲ್ಲಿ ರಕ್ಷಣಾ ಪಡೆಯ ಮತ್ತು ಯೋಧರ ಚಿತ್ರಗಳನ್ನು ಬಳಸಿರುವುದನ್ನು ಉಲ್ಲೇಖಿಸಿ ಈ ಕುರಿತು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸ್ವರಾಜ್‌ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್‌ ಟ್ವೀಟ್‌ಗಳನ್ನು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.