ADVERTISEMENT

‘ನಿಗದಿಯುಂತೆ ಚುನಾವಣೆಗೆ ಆಯೋಗದ ಸಿದ್ಧತೆ’

ಪಿಟಿಐ
Published 28 ಡಿಸೆಂಬರ್ 2020, 11:37 IST
Last Updated 28 ಡಿಸೆಂಬರ್ 2020, 11:37 IST
 ಕೇಂದ್ರ ಚುನಾವಣಾ ಆಯೋಗ
 ಕೇಂದ್ರ ಚುನಾವಣಾ ಆಯೋಗ   

ನವದೆಹಲಿ: ಕೋವಿಡ್‌ ಪರಿಸ್ಥಿತಿಯ ನಡುವೆಯೂ ಬಿಹಾರದಲ್ಲಿ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ ಚುನಾವಣಾ ಆಯೋಗವು ಈಗ, ಮುಂದಿನ ವರ್ಷ ನಿಗದಿಯಂತೆಯೇ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ತಿಳಿಸಿದರು.

ಯಶಸ್ವಿಯಾಗಿ ಬಿಹಾರದಲ್ಲಿ ಚುನಾವಣೆ ನಡೆಸಿದೆವು. ಮತದಾನ ಪ್ರಮಾಣ ಶೇ 57.34 ಇದ್ದು, ಇದು ಹಿಂದಿನ 2015ರ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 56.8ಕ್ಕಿಂತಲೂ ಹೆಚ್ಚಾಗಿತ್ತು.ಮಹಿಳೆಯರು ಪುರುಷರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗಿಯಾಗಿದ್ದರು ಎಂದು ಅವರು ತಿಳಿಸಿದರು.

ಕೋವಿಡ್‌ ಪರಿಸ್ಥಿತಿಯ ನಂತರ ಪೂರ್ಣಪ್ರಮಾಣದಲ್ಲಿ ಚುನಾವಣೆ ನಡೆದಿದ್ದ ರಾಜ್ಯ ಬಿಹಾರ. ಇಲ್ಲಿ 7 ಕೋಟಿ ಮತದಾರರ ಪೈಕಿ 4 ಕೋಟಿ ಮತದಾರರು ಹಕ್ಕು ಚಲಾಯಿಸಿದ್ದರು. ಅಂತರ ಕಾಯ್ದುಕೊಳ್ಳುವಿಕೆ ನಿಯಮಕ್ಕೆ ಅನುಗುಣವಾಗಿ ಮತಗಟ್ಟೆಗಳ ಸಂಖ್ಯೆಯನ್ನು 1000 ದಿಂದ 1,200ಕ್ಕೆ ಹೆಚ್ಚಿಸಲಾಗಿತ್ತು ಎಂದು ತಿಳಿಸಿದರು.

ADVERTISEMENT

ಅಂತೆಯೇ, ಮುಂದಿನ ವರ್ಷ ಚುನಾವಣೆ ನಡೆಯಬೇಕಿರುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿಗಳಲ್ಲಿಯೂ ಮತಗಟ್ಟೆಗಳ ಸಂಖ್ಯೆ ಸುಮಾರು 28,000ದಷ್ಟು ಹೆಚ್ಚಾಗುವ ಸಂಭವವಿದೆ ಎಂದರು.

ಚುನಾವಣೆ ನಡೆಯಬೇಕಿರುವ ಇತರೆ ರಾಜ್ಯಗಳ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದರು. ಕೋವಿಡ್‌ ಪರಿಸ್ಥಿತಿಯ ನಡುವೆಯೂ ಚುನಾವಣೆ ನಡೆಸುವ ತೀರ್ಮಾನವನ್ನು ಆಯೋಗ ಕಳೆದ ಆಗಸ್ಟ್‌ ತಿಂಗಳು ಕೈಗೊಂಡಿತ್ತು.

ಆಯೋಗದ ಬಳಿ ಲಭ್ಯವಿರುವ ಮಾಹಿತಿ ಅನುಸಾರ, ಬಿಹಾರದಲ್ಲಿ ಪ್ರಚಾರದ ವೇಳೆ ಕೋವಿಡ್‌ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ಸುಮಾರು 156 ಪ್ರಕರಣ ದಾಖಲಿಸಲಾಗಿದೆ. ಆರೋಗ್ಯ ರಕ್ಷಣೆ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿ ಈ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.