ADVERTISEMENT

ಎಪಿಕ್‌, ಆಧಾರ್ ಜೋಡಣೆ | ತಾಂತ್ರಿಕ ಸಮಾಲೋಚನೆ ಶೀಘ್ರ: ಚುನಾವಣಾ ಆಯೋಗ

ಪಿಟಿಐ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
   

ನವದೆಹಲಿ: ಮತದಾರರ ಗುರುತಿನ ಚೀಟಿಯೊಂದಿಗೆ (ಎಪಿಕ್‌) ಆಧಾರ್‌ ಸಂಖ್ಯೆ ಜೋಡಿಸುವ ಕುರಿತು ಚುನಾವಣಾ ಆಯೋಗ ಮತ್ತು ಭಾರತ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ತಜ್ಞರು ಶೀಘ್ರದಲ್ಲಿಯೇ ತಾಂತ್ರಿಕ ಸಮಾಲೋಚನೆ ಆರಂಭಿಸುವರು ಎಂದು ಆಯೋಗ ಮಂಗಳವಾರ ಹೇಳಿದೆ.

ಈ ಸಂಬಂಧ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಈ ವಿಷಯ ತಿಳಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್ ಸಂಧು ಹಾಗೂ ವಿವೇಕ ಜೋಶಿ, ಗೃಹ ಸಚಿವಾಲಯ ಕಾರ್ಯದರ್ಶಿ ಗೋವಿಂದ ಮೋಹನ್, ಶಾಸಕಾಂಗ ಕಾರ್ಯದರ್ಶಿ ರಾಜೀವ್‌ ಮಣಿ (ಕಾನೂನು ಸಚಿವಾಲಯ), ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಾರ್ಯದರ್ಶಿ ಎಸ್‌.ಕೃಷ್ಣನ್ ಹಾಗೂ ಪ್ರಾಧಿಕಾರದ ಸಿಇಒ ಭುವನೇಶ ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು. 

ADVERTISEMENT

ಮತದಾರರ ಪಟ್ಟಿ ಕುರಿತಂತೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ, ಹಲವು ಮತದಾರರ ಗುರುತಿನ ಚೀಟಿಗಳಲ್ಲಿ ಒಂದೇ ರೀತಿ ಸಂಖ್ಯೆ ಇದೆ ಎಂದೂ ಆರೋಪಿಸಿದ್ದವು. 

ಈ ವಿಚಾರವನ್ನು ಮುಂದಿಟ್ಟುಕೊಂಡು ಸಂಸತ್‌ನ ಒಳಗೆ ಹಾಗೂ ಹೊರಗೆ ಹೋರಾಟ ಮಾಡಿದ್ದವು. ಈ ಕಾರಣಕ್ಕೆ, ಎಪಿಕ್‌ ಮತ್ತು ಆಧಾರ್‌ ಸಂಖ್ಯೆ ಜೋಡಣೆ ಪ್ರಕ್ರಿಯೆಗೆ ಆಯೋಗ ಸಜ್ಜಾಗುತ್ತಿದೆ. 

ಸಂವಿಧಾನದ 326ನೇ ವಿಧಿ ಪ್ರಕಾರ, ಭಾರತದ ಪ್ರಜೆಗೆ ಮಾತ್ರ ಮತ ಚಲಾಯಿಸುವ ಹಕ್ಕು ನೀಡಲಾಗುತ್ತದೆ. ಆಧಾರ್‌ ಎಂಬುದು ವ್ಯಕ್ತಿಯ ಗುರುತು ಸೂಚಿಸುತ್ತದೆ. ಈ ಕಾರಣಕ್ಕೆ, ಸಂವಿಧಾನದ 326ನೇ ವಿಧಿ ಮತ್ತು ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4), 23(5) ಹಾಗೂ 23(6)ರಡಿಯ ಅವಕಾಶಗಳು ಹಾಗೂ 2023ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಎಪಿಕ್ ಮತ್ತು ಆಧಾರ್‌ ಜೋಡಣೆ ಮಾಡಲಾಗುತ್ತದೆ’ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಅಂಶಗಳು

  • ಮತದಾರರು ಸ್ವ ಇಚ್ಛೆಯಿಂದ ತಮ್ಮ ಆಧಾರ್ ಸಂಖ್ಯೆಯನ್ನು ಎಪಿಕ್‌ ಜೊತೆ ಜೋಡಣೆ ಮಾಡಲು 2024ರ ಮಾರ್ಚ್ 31ರ ವರೆಗೆ ಚುನಾವಣಾ ಆಯೋಗ ಅವಕಾಶ ನೀಡಿತ್ತು. 

  • ದೇಶದಲ್ಲಿ ಪ್ರಸ್ತುತ 99.22 ಕೋಟಿ ಮತದಾರರಿದ್ದಾರೆ. 66.23 ಕೋಟಿ ಮತದಾರರು ಸ್ವ ಇಚ್ಛೆಯಿಂದ ತಮ್ಮ ಆಧಾರ್‌ ಸಂಖ್ಯೆಯನ್ನು ಆಯೋಗಕ್ಕೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಮತದಾರನಾಗಿ/ಮತದಾರಳಾಗಿ ನೋಂದಣಿ ಮಾಡಿಸಲು ತನ್ನ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗವು 2023ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು

  • ಮತದಾರರ ಪಟ್ಟಿಗಳಲ್ಲಿ ಹೆಸರುಗಳು ಪುನರಾವರ್ತನೆಯಾಗುವುದನ್ನು
    ತಪ್ಪಿಸುವುದಕ್ಕಾಗಿ ಆಧಾರ್‌ ಸಂಖ್ಯೆಯನ್ನು ಎಪಿಕ್‌ಗೆ ಜೋಡಿಸುವ ಉದ್ದೇಶದಿಂದ ಚುನಾವಣಾ ಆಯೋಗವು 2015ರಲ್ಲಿ ರಾಷ್ಟ್ರೀಯ ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮಕ್ಕೆ (ಎನ್‌ಇಆರ್‌ಪಿಎಪಿ) ಚಾಲನೆ ನೀಡಿತ್ತು

  • ಆಧಾರ್‌ ಸಂಖ್ಯೆಯನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ ಕಾರಣ ಎನ್‌ಇಆರ್‌ಪಿಎಪಿಯನ್ನು ಆಯೋಗ ಸ್ಥಗಿತಗೊಳಿಸಿತ್ತು

ನಕಲಿ ಮತದಾರರ ಪತ್ತೆಗೆ ತಂತ್ರಾಂಶ

ಕೋಲ್ಕತ್ತ (ಪಿಟಿಐ): ನಕಲಿ ಮತದಾರರನ್ನು ಪತ್ತೆ ಮಾಡಲು ತಂತ್ರಾಂಶದಲ್ಲಿ ಹೊಸ ಆಯ್ಕೆಯೊಂದನ್ನು ಅಳವಡಿಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ನಕಲಿ ಮತದಾರರ ಬಗ್ಗೆ ಟಿಎಂಸಿ ದನಿ ಎತ್ತಿರುವ ಸಂದರ್ಭದಲ್ಲಿ ಆಯೋಗವು ಈ ಮಾತು ಹೇಳಿದೆ.

ನಿರ್ದಿಷ್ಟ ಎಪಿಕ್ ಸಂಖ್ಯೆಗೆ ಒಂದಕ್ಕಿಂತ ಹೆಚ್ಚು ಮತದಾರರ ಹೆಸರು ಜೋಡಣೆ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಹೊಸ ಆಯ್ಕೆಯು ಮತದಾರರ ನೋಂದಣಿ ಅಧಿಕಾರಿಗಳಿಗೆ ನೆರವು ನೀಡಲಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತಗಟ್ಟೆವಾರು ವಿವರ: ಚರ್ಚೆಗೆ ಸಿದ್ಧ

ಪ್ರತಿ ಮತಗಟ್ಟೆಯಲ್ಲಿ ಎಷ್ಟು ಮಂದಿ ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂಬ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎನ್ನುವ ಬೇಡಿಕೆಯ ಬಗ್ಗೆ ಚರ್ಚಿಸಲು ಸಿದ್ಧ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿರುವುದನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ದಾಖಲಿಸಿಕೊಂಡಿದೆ.

ಈ ವಿಚಾರವಾಗಿ ಆಯೋಗಕ್ಕೆ 10 ದಿನಗಳಲ್ಲಿ ಮನವಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು, ಅರ್ಜಿದಾರರಾದ ಸಂಸದೆ ಮಹುವಾ ಮೊಯಿತ್ರಾ ಹಾಗೂ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಸಂಸ್ಥೆಗೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.