
ನವದೆಹಲಿ: ದೇಶದ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಕರೆಯುವ ಮೂಲಕ, ಸ್ವಯಂಘೋಷಿತ ಬುದ್ಧಿಜೀವಿಗಳು ನಾಗರಿಕತೆಗೆ ಅವಮಾನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗ’ದಲ್ಲಿ ಶನಿವಾರ ಅವರು ಮಾತನಾಡಿದರು. ‘ಮುಂದಿನ 10 ವರ್ಷಗಳಲ್ಲಿ, ಗುಲಾಮಗಿರಿ ಮನಃಸ್ಥಿತಿಯಿಂದ ದೇಶವನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕು’ ಎಂದು ದೇಶದ ಜನರಿಗೆ ಕರೆ ನೀಡಿದರು.
‘ಜಗತ್ತು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತವು ಆತ್ಮವಿಶ್ವಾಸದಿಂದಿದೆ. ಯಾವುದೇ ದೇಶವು ಆತ್ಮವಿಶ್ವಾಸವಿಲ್ಲದೇ ಮುಂದುವರಿಯಲು ಸಾಧ್ಯವಿಲ್ಲ. ಭಾರತದ ಪ್ರತಿಯೊಂದು ವಲಯವೂ ವಸಾಹತುಶಾಹಿ ಮನಃಸ್ಥಿತಿಯನ್ನು ತೊರೆದು ಹೊಸ ಸಾಧನೆಗಳನ್ನು ಮಾಡುತ್ತಿದೆ’ ಎಂದು ಹೇಳಿದರು.
‘ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು ವಸಾಹತುಶಾಹಿ ಮನಃಸ್ಥಿತಿಯು ಪ್ರಮುಖ ಅಡಚಣೆಯಾಗಿದೆ. ಇದರಿಂದ ಮುಕ್ತವಾಗುವತ್ತ ದೇಶವು ಕೆಲಸ ಮಾಡುತ್ತಿದೆ. ದೇಶದ ನಿಧಾನಗತಿಯ ಆರ್ಥಿಕತೆಯ ಮೇಲೆ ಹಿಂದೂ ನಾಗರಿಕತೆಯು ಪರಿಣಾಮ ಬೀರಿದೆ ಎಂಬ ತಪ್ಪು ಗ್ರಹಿಕೆಯನ್ನು ತಳ್ಳಿಹಾಕಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.