ADVERTISEMENT

ಹಣ ಅಕ್ರಮ ವರ್ಗಾವಣೆ: ಮಹಾರಾಷ್ಟ್ರದ ಮಾಜಿ ಶಾಸಕ ಪಾಟೀಲ್‌ ಬಂಧನ

ಪಿಟಿಐ
Published 16 ಜೂನ್ 2021, 9:24 IST
Last Updated 16 ಜೂನ್ 2021, 9:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಪನ್ವೇಲ್‌ ಮೂಲದ ಕರ್ನಲ್‌ ನಗರಿ ಸಹಕಾರಿ ಬ್ಯಾಂಕಿನಲ್ಲಿ ನಡೆದ ₹512 ಕೋಟಿ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಎಸ್ ಪಾಟೀಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಮಂಗಳವಾರ ರಾತ್ರಿ 8.15ರ ಸುಮಾರಿಗೆ ವಿವೇಕಾನಂದ ಪಾಟೀಲ್‌ ಅವರನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಬಾರ್ಲಾಡ್‌ ಎಸ್ಟೇಟ್‌ ಪ್ರದೇಶದಲ್ಲಿರುವ ಇಡಿ ಕಚೇರಿಯಲ್ಲಿ ಪಾಟೀಲ್‌ ವಿಚಾರಣೆಗೆ ಹಾಜರಾಗಿದ್ದರು. ಈ ಬಳಿಕ ಅವರನ್ನು ಬಂಧಿಸಲಾಯಿತು.

ಪಿಎಂಎಲ್‌ಎ ಕಾಯ್ದೆಯಡಿ ಪಾಟೀಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಕರ್ನಲ್‌ ನಗರಿ ಸಹಕಾರಿ ಬ್ಯಾಂಕ್‌ನಲ್ಲಿ ₹512.54 ಕೋಟಿ ವಂಚನೆ ನಡೆದಿದೆ ಎಂಬ ದೂರು ಕೇಳಿಬಂದಿತ್ತು. ಈ ಆರೋಪದಡಿ ನವಿ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಕಳೆದ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಇದರ ಆಧಾರ ಮೇರೆಗೆ ಇಡಿಯು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ.

ಪನ್ವೇಲ್‌ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಾಟೀಲ್ ಅವರು ಕರ್ನಲ್‌ ನಗರಿ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾಗಿದ್ದರು.ಆರೋಪಿಗಳಾದ ಪಾಟೀಲ್‌ ಸೇರಿದಂತೆ ಬ್ಯಾಂಕಿನ ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರ ಸದಸ್ಯರು ಸಂಸ್ಥೆಯಿಂದ ಸಾಲ ಪಡೆದಿದ್ದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ 17 ಶಾಖೆಗಳಲ್ಲಿ ವಿಶೇಷ ಲೆಕ್ಕಪರಿಶೋಧನೆಯನ್ನು ನಡೆಸಿತ್ತು. ಈ ವೇಳೆ ಬ್ಯಾಂಕಿನಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.