ADVERTISEMENT

ಛತ್ತೀಸಗಢ: ಕಾಂಗ್ರೆಸ್‌ ಕಚೇರಿ, ಶಾಸಕ ಲಖ್ಮಾಗೆ ಸೇರಿದ ಸ್ವತ್ತು ಜಪ್ತಿ ಮಾಡಿದ ಇಡಿ

ಪಿಟಿಐ
Published 13 ಜೂನ್ 2025, 15:54 IST
Last Updated 13 ಜೂನ್ 2025, 15:54 IST
–
   

ನವದೆಹಲಿ: ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ, ಕಾಂಗ್ರೆಸ್‌ ಕಚೇರಿ ಹಾಗೂ ಪಕ್ಷದ ಶಾಸಕ ಕವಾಸಿ ಲಖ್ಮಾ ಅವರಿಗೆ ಸೇರಿದ ಆಸ್ತಿಗಳು ಸೇರಿ ಒಟ್ಟು ₹6.15 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಮೂಲಗಳು ಹೇಳಿವೆ.

ಶಾಸಕ ಲಖ್ಮಾ, ಅವರ ಪುತ್ರ ಹರೀಶ್‌ ಲಖ್ಮಾ ಅವರಿಗೆ ಸೇರಿದ ಸ್ವತ್ತುಗಳು ಹಾಗೂ ಸುಕ್ಮಾ ಜಿಲ್ಲೆಯಲ್ಲಿರುವ ಪಕ್ಷದ ಕಚೇರಿ ಕಟ್ಟಡವನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ₹2,100 ಕೋಟಿ ಮೊತ್ತ ಒಳಗೊಂಡ ಮದ್ಯದ ಹಗರಣಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ರಾಯಪುರ, ಸುಕ್ಮಾ ಹಾಗೂ ಧಮ್ತಾರಿ ಜಿಲ್ಲೆಗಳಲ್ಲಿರುವ ಶಾಸಕ ಲಖ್ಮಾ ಅವರಿಗೆ ಸೇರಿದ ಸ್ಥಳಗಳಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇ.ಡಿ ದಾಳಿ ನಡೆಸಿತ್ತು. ನಂತರ, ಶಾಸಕ ಲಖ್ಮಾ ಅವರನ್ನು ಬಂಧಿಸಿತ್ತು.

ಕವಾಸಿ ಲಖ್ಮಾ ಅವರು ಈ ಹಿಂದಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.