ADVERTISEMENT

ಜಾರಿ ನಿರ್ದೇಶನಾಲಯದಿಂದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸಂಬಂಧಿಯ ಆಸ್ತಿ ಜಪ್ತಿ

ಪಿಟಿಐ
Published 22 ಮಾರ್ಚ್ 2022, 14:09 IST
Last Updated 22 ಮಾರ್ಚ್ 2022, 14:09 IST
ಉದ್ಧವ್ ಠಾಕ್ರೆ (ಪಿಟಿಐ ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ (ಪಿಟಿಐ ಸಂಗ್ರಹ ಚಿತ್ರ)   

ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹತ್ತಿರದ ಸಂಬಂಧಿಯೊಬ್ಬರ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಜಪ್ತಿ ಮಾಡಿದೆ.

ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಠಾಕ್ರೆ ಅವರ ಹತ್ತಿರದ ಸಂಬಂಧಿಕರ ಒಡೆತನದ ಕಂಪನಿಗೆ ಸೇರಿದ ₹6.45 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌’ಗೆ ಸೇರಿದ ‘ನೀಲಾಂಬರಿ ಪ್ರಾಜೆಕ್ಟ್‌’ನ 11 ಫ್ಲ್ಯಾಟ್‌ಗಳನ್ನು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತೆ ತಾತ್ಕಾಲಿಕ ಆದೇಶ ನೀಡಲಾಗಿದೆ ಎಂದು ಇ.ಡಿ. ಪ್ರಕಟಣೆ ತಿಳಿಸಿದೆ.

ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಅವರ ಸಹೋದರ ಶ್ರೀಧರ್ ಮಾಧವ್ ಪಟಾನ್‌ಕರ್ ಅವರು ‘ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌’ ಮಾಲೀಕರಾಗಿದ್ದಾರೆ.

‘ಪುಷ್ಪಕ್ ಬುಲಿಯನ್’ ಎಂಬ ಕಂಪನಿಯ ವಿರುದ್ಧ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತಿದೆ. ಈ ಕಂಪನಿಯ ಹಣವನ್ನು ‘ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌’ನ ರಿಯಲ್ ಎಸ್ಟೇಟ್‌ ಯೋಜನೆಗಳಲ್ಲಿ ಅಕ್ರಮವಾಗಿ ತೊಡಗಿಸಿಕೊಂಡಿರುವ ಆರೋಪವಿದೆ ಎಂದು ಇ.ಡಿ. ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.