
ನವದೆಹಲಿ: ಫರೀದಾಬಾದ್ ಮೂಲದ ಅಲ್ ಫಲಾಹ್ ವಿಶ್ವವಿದ್ಯಾಲಯವು ಭಯೋತ್ಪಾದನಾ ನಂಟಿರುವ ಮೂವರು ವೈದ್ಯರು ಸೇರಿದಂತೆ ಇತರ ಅನೇಕ ವೈದ್ಯರನ್ನು ಪೊಲೀಸರ ಪರಿಶೀಲನೆಯಿಲ್ಲದೆ ನೇಮಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ.
ನೇಮಿಸಿಕೊಂಡಿರುವ ವೈದ್ಯರಲ್ಲಿ ಇಬ್ಬರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದ್ದು, ಮೂರನೇ ವೈದ್ಯ 2025ರ ನವೆಂಬರ್‌ನಲ್ಲಿ ಕೆಂಪು ಕೋಟೆ ಸ್ಫೋಟದ ಆಪಾದಿತ ಆತ್ಮಹತ್ಯಾ ಬಾಂಬರ್ ಎಂದು ಹೇಳಲಾಗಿದೆ.
ವಿಶ್ವವಿದ್ಯಾಲಯದ ಪ್ರವರ್ತಕ ಜವಾದ್ ಅಹ್ಮದ್ ಸಿದ್ದೀಕಿ ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ, ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ನೀಡಿದ ಹೇಳಿಕೆಗಳಿರುವ ಆರೋಪಪಟ್ಟಿಯನ್ನು ದೆಹಲಿ ನ್ಯಾಯಾಲಯಕ್ಕೆ ಇ.ಡಿ ಶುಕ್ರವಾರ ಸಲ್ಲಿಸಿದೆ.
ವಿದ್ಯಾರ್ಥಿಗಳು ಪಾವತಿಸುವ ಶುಲ್ಕದಿಂದ ಅಕ್ರಮವಾಗಿ ಹಣ ಗಳಿಸಿದ ಆರೋಪ ಸಿದ್ದೀಕಿ ಮತ್ತು ಅವರ ಅಲ್ ಫಲಾಹ್ ಚಾರಿಟೇಬಲ್ ಟ್ರಸ್ಟ್ ಮೇಲಿದೆ. ಆದಾಗ್ಯೂ, 260 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ.
ಶುಕ್ರವಾರ ಇ.ಡಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಫರೀದಾಬಾದ್‌ನ ಧೌಜ್ ಪ್ರದೇಶದಲ್ಲಿರುವ ಸುಮಾರು ₹140 ಕೋಟಿ ಮೌಲ್ಯದ ವಿಶ್ವವಿದ್ಯಾಲಯದ ಭೂಮಿ ಮತ್ತು ಕಟ್ಟಡವನ್ನು ತಾತ್ಕಾಲಿಕವಾಗಿ ಮುಟ್ಟಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.