ಹೈದರಾಬಾದ್: ಈ ಹಿಂದಿನ ಬಿಆರ್‌ಎಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕುರಿಗಳ ವಿತರಣೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಗರದ 8 ಕಡೆಗಳಲ್ಲಿ ಬುಧವಾರ ಶೋಧ ನಡೆಸಿದರು.
ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಟಿ.ಶ್ರೀನಿವಾಸ ಯಾದವ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಜಿ.ಕಲ್ಯಾಣ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿ ಶೋಧ ನಡೆಸಲಾಗಿದೆ ಎಂದು ಇ.ಡಿ ಮೂಲಗಳು ಹೇಳಿವೆ.
ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕಲ್ಯಾಣ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಎಫ್‌ಐಆರ್ ಆಧಾರದ ಮೇಲೆ, ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ.
ಕುರಿಗಳ ವಿತರಣೆ ಮತ್ತು ಅಭಿವೃದ್ಧಿ ಯೋಜನೆಯಡಿ(ಎಸ್‌ಆರ್‌ಡಿಎಸ್) ಅಂದಾಜು ₹700 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. 2017ರಲ್ಲಿ ಜಾರಿಗೊಳಿಸಿದ್ದ ಈ ಯೋಜನೆಯ ಮೊದಲ ಹಂತದಲ್ಲಿ, ಅರ್ಹ ಕುರಿಗಾಹಿ ಕುಟುಂಬಗಳಿಗೆ 1.28 ಕೋಟಿಗೂ ಅಧಿಕ ಕುರಿಗಳನ್ನು ವಿತರಣೆ ಮಾಡಲಾಗಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.