ADVERTISEMENT

ಅಲ್‌ ಫಲಾಹ್‌ ಗ್ರೂಪ್‌ ತನಿಖೆ |ಸಿದ್ದಿಕಿ ದೇಶ ತೊರೆಯುವ ಸಾಧ್ಯತೆ ಹೆಚ್ಚು: ED

ಅಕ್ರಮವಾಗಿ ₹415 ಕೋಟಿ ಸಂಗ್ರಹ– ಕೋರ್ಟ್‌ಗೆ ಮಾಹಿತಿ

ಪಿಟಿಐ
Published 20 ನವೆಂಬರ್ 2025, 0:30 IST
Last Updated 20 ನವೆಂಬರ್ 2025, 0:30 IST
<div class="paragraphs"><p>ಕೋರ್ಟ್</p></div>

ಕೋರ್ಟ್

   

ನವದೆಹಲಿ: ‘ಅಲ್‌ ಫಲಾಹ್ ಸಮೂಹದ ಅಧ್ಯಕ್ಷ ಜಾವದ್‌ ಅಹ್ಮದ್‌ ಸಿದ್ದಿಕಿ ಹಣವಂತ ಮಾತ್ರವಲ್ಲ, ಪ್ರಭಾವಿ ವ್ಯಕ್ತಿಯೂ ಹೌದು. ಅವರ ಕುಟುಂಬದ ಹತ್ತಿರದ ಸಂಬಂಧಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ನೆಲಸಿದ್ದಾರೆ. ಈ ಕಾರಣಗಳಿಂದಾಗಿ ತನಿಖೆಯಿಂದ ತಪ್ಪಿಸಿಕೊಳ್ಳಲು ಅವರು ದೇಶ ತೊರೆಯುವ ಸಾಧ್ಯತೆ ಹೆಚ್ಚು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಹೇಳಿದೆ.

ಇಲ್ಲಿನ ಸಾಕೇತ್‌ ಕೋರ್ಟ್‌ ನ್ಯಾಯಾಧೀಶರ ಮುಂದೆ ಸಿದ್ದಿಕಿ ಅವರನ್ನು ಹಾಜರುಪಡಿಸಿ ಕಸ್ಟಡಿಗೆ ಕೋರಿದ ವೇಳೆ, ಜಾರಿ ನಿರ್ದೇಶನಾಲಯ ಈ ಹೇಳಿಕೆ ನೀಡಿದೆ.

ADVERTISEMENT

‘ಅಲ್‌ ಫಲಾಹ್‌ ಟ್ರಸ್ಟ್‌ ನಡೆಸುವ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಂದ ‘ಅಕ್ರಮ’ವಾಗಿ ಕನಿಷ್ಠ ₹415 ಕೋಟಿಯನ್ನು ಸಿದ್ದಿಕಿ ಸಂಗ್ರಹಿಸಿದ್ದಾರೆ. ಸಂಸ್ಥೆಗೆ ಮಾನ್ಯತೆ ಪಡೆಯುವ ಕಾರಣ ನೀಡಿ ಈ ದೊಡ್ಡ ಮೊತ್ತ ಸಂಗ್ರಹಿಸಲಾಗಿದೆ’ ಎಂದೂ ಇ.ಡಿ ತಿಳಿಸಿದೆ.

‘ಸಿದ್ದಿಕಿ ವಿರುದ್ಧ ಗಂಭೀರವಾದ ಆರೋಪಗಳಿವೆ. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಅವರನ್ನು ಬಂಧಿಸಲಾಗಿದೆ. ಒಂದು ವೇಳೆ ಅವರನ್ನು ಬಂಧಿಸದಿದ್ದಲ್ಲಿ ಅವರು ವಿಚಾರಣೆಗೆ ಹಾಜರಾಗದೇ ಇರುವ ಇಲ್ಲವೇ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

‘ಅವರು ಸ್ವತ್ತುಗಳನ್ನು ಸ್ಥಳಾಂತರಿಸಬಹುದು ಹಾಗೂ ತನಿಖೆಗೆ ಅಡ್ಡಿಪಡಿಸಬಹುದು ಇಲ್ಲವೆ ತನಿಖೆ ವಿಳಂಬವಾಗುವಂತೆ ಮಾಡಬಹುದು’ ಎಂದು ವಾದಿಸಿದೆ.

ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಕುರಿತು ತನಿಖೆ ನಡೆಯುತ್ತಿದ್ದು, ಈ ಪ್ರಕರಣದ ಆರೋಪಿಗಳು ಅಲ್‌ ಫಲಾಹ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದರು. ಹೀಗಾಗಿ, ಅಲ್‌ ಫಲಾಹ್‌ ಸಮೂಹವು ಈಗ ತನಿಖೆಯ ಕೇಂದ್ರಬಿಂದುವಾಗಿದೆ.

ಸಿದ್ದಿಕಿ 13 ದಿನ ಇ.ಡಿ ಕಸ್ಟಡಿಗೆ

ಅಲ್‌ ಫಲಾಹ್‌ ಸಮೂಹದ ಅಧ್ಯಕ್ಷ ಜಾವದ್‌ ಅಹ್ಮದ್‌ ಸಿದ್ದಿಕಿ ಅವರನ್ನು ಇಲ್ಲಿನ ನ್ಯಾಯಾಲಯ 13 ದಿನ ಜಾರಿ ನಿರ್ದೇಶನಾಲಯ (ಇ.ಡಿ) ಕಸ್ಟಡಿಗೆ ನೀಡಿ ಬುಧವಾರ ಆದೇಶಿಸಿದೆ. ಇಲ್ಲಿನ ಸಾಕೇತ್ ಕೋರ್ಟ್‌ನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ಶೀತಲ್ ಚೌಧರಿ ಪ್ರಧಾನ್ ಅವರ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಅವರನ್ನು ಹಾಜರುಪಡಿಸಿದರು.

‘ಸಿದ್ದಿಕಿ ವಿರುದ್ಧ ಗಂಭೀರ ಆರೋಪಗಳು ಇರುವ ಕಾರಣ ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಅವರನ್ನು 14 ದಿನ ಕಸ್ಟಡಿಗೆ ನೀಡಬೇಕು’ ಎಂದು ಇ.ಡಿ ಕೋರಿತು. ಇದಕ್ಕೆ ಆಕ್ಷೇಪಿಸಿದ ಸಿದ್ದಿಕಿ ಪರ ವಕೀಲರು ‘ಈ ಪ್ರಕರಣದಲ್ಲಿ ನನ್ನ ಕಕ್ಷಿದಾರನ ವಿರುದ್ಧ ತಪ್ಪಾಗಿ ಆರೋಪ ಹೊರಿಸಲಾಗಿದೆ’ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

‘ಗಂಭೀರ ಆರೋಪಗಳ ಕಾರಣ ಹಣ ಅಕ್ರಮ ವರ್ಗಾವಣೆ ಕಾಯ್ದೆಯ ಅವಕಾಶಗಳಡಿ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ. ತನಿಖೆ ಕೂಡ ಇನ್ನೂ ಆರಂಭಿಕ ಹಂತದಲ್ಲಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು  ಅವರನ್ನು 13 ದಿನ ಇ.ಡಿ ವಶಕ್ಕೆ ನೀಡಿ ಆದೇಶಿಸಿದರು.

ಇ.ಡಿ ವಾದವೇನು?

* ಅಲ್‌ ಫಲಾಹ್‌ ಟ್ರಸ್ಟ್‌ ಅಡಿಯ ವಿಶ್ವವಿದ್ಯಾಲಯ ಹಾಗೂ ಇತರ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ರಜಿಸ್ಟರ್‌ಗಳು ಶುಲ್ಕದ ಲೆಡ್ಜರ್‌ಗಳು ಲೆಕ್ಕಪತ್ರ ಹಾಗೂ ಐಟಿ ಸಿಸ್ಟಮ್‌ಗಳನ್ನು ನಿರ್ವಹಣೆ ಮಾಡುವ ಸಿಬ್ಬಂದಿ ಮೇಲೆ ಸಿದ್ದಿಕಿ ಹಿಡಿತ ಹೊಂದಿದ್ದಾರೆ. ಹೀಗಾಗಿ ಈ ದಾಖಲೆಗಳನ್ನು ಅವರು ನಾಶಪಡಿಸಬಹುದು ಇಲ್ಲವೇ ತಿದ್ದಬಹುದು

* 1990ರ ಬಳಿಕ ಅಲ್‌ ಫಲಾಹ್‌ ಸಮೂಹ ಭಾರಿ ಬೆಳವಣಿಗೆ ಕಂಡಿದೆ. ಈ ಭಾಗದಲ್ಲಿ ದೊಡ್ಡ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಮೂಹದ ವಿವಿಧ ಸಂಸ್ಥೆಗಳ ಹಣಕಾಸು ವ್ಯವಹಾರದಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಿವೆ

* ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಉಲ್ಲೇಖ ಮಾಡದೇ ಇರುವ ಹಣಕಾಸು ವ್ಯವಹಾರಗಳನ್ನು ಹಾಗೂ ಅಕ್ರಮವಾಗಿ ಸಂಗ್ರಹಿಸಿದ ಹಣ ಪತ್ತೆ ಮಾಡುವುದಕ್ಕೆ ಸಿದ್ದಿಕಿ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯ ಇದೆ. ಪಿಎಂಎಲ್‌ ಕಾಯ್ದೆಯಡಿ ಅಕ್ರಮ ಸ್ವತ್ತುಗಳು/ನಗದುವನ್ನು ಸಕಾಲದಲ್ಲಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಅವರನ್ನು ವಿಚಾರಣೆಗೆ ಒಳಪಡಿಸುವುದು ಅಗತ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.