ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ರಾಬರ್ಟ್‌ ವಾದ್ರಾಗೆ ಇ.ಡಿ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:55 IST
Last Updated 16 ಜೂನ್ 2025, 15:55 IST
ರಾಬರ್ಟ್‌ ವಾದ್ರಾ
ರಾಬರ್ಟ್‌ ವಾದ್ರಾ   

ನವದೆಹಲಿ: ಕಾಂಗ್ರೆಸ್‌ನ ಸಂಸದರಾದ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಮತ್ತೆ ಸಮನ್ಸ್‌ ಜಾರಿಗೊಳಿಸಿದೆ.

ಬ್ರಿಟನ್‌ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್‌ ಭಂಡಾರಿ ಅವರಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜೂನ್‌ 17ರಂದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ತನಿಖೆ ನಡೆಯುತ್ತಿರುವ ಈ ಪ‍್ರಕರಣದಲ್ಲಿ, ಜೂನ್‌ 10ರಂದು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಸಮನ್ಸ್‌ ನೀಡಲಾಗಿತ್ತು. ಜೂನ್‌ 9ರಂದು ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವಾದ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ. 

ADVERTISEMENT

ಪಿಎಂಎಲ್‌ಎ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳಲು ತನಿಖಾ ಸಂಸ್ಥೆಯು ವಾದ್ರಾಗೆ ಮತ್ತೆ ಸಮನ್ಸ್‌ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.

ಹರಿಯಾಣದಲ್ಲಿ 2008ರಲ್ಲಿ ನಡೆದ ಭೂ ಒಪ್ಪಂದದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ವಾದ್ರಾ ಅವರನ್ನು ಏಪ್ರಿಲ್‌ನಲ್ಲಿ ಸತತ ಮೂರು ದಿನ ವಿಚಾರಣೆಗೆ ಒಳಪಡಿಸಿತ್ತು. ಮೂರು ಪ್ರಕರಣಗಳಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.

ದೆಹಲಿಯಲ್ಲಿ ಆದಾಯ ತೆರಿಗೆ ಇಲಾಖೆಯು 2016ರಲ್ಲಿ ದಾಳಿ ನಡೆಸಿದ ಬೆನ್ನಿಗೆ ಭಂಡಾರಿ ಲಂಡನ್‌ಗೆ ಪರಾರಿ ಆಗಿದ್ದರು.

ಇ.ಡಿ.ಯ ಆರೋಪಗಳನ್ನು ರಾಬರ್ಟ್‌ ವಾದ್ರಾ ನಿರಾಕರಿಸಿದ್ದಾರೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.