
ನವದೆಹಲಿ: ಎಜುಟೆಕ್ ಸ್ಟಾರ್ಟಪ್ ಕಂಪನಿ ಬೆಂಗಳೂರು ಮೂಲದ ಬೈಜೂಸ್‌ನ ಸಿಒಒ ಬೈಜೂ ರವೀಂದ್ರನ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡುವಂತೆ ಬ್ಯೂರೊ ಆಫ್ ಇಮಿಗ್ರೇಷನ್ ಅನ್ನು ಜಾರಿ ನಿರ್ದೇಶನಾಲಯ (ED) ಕೋರಿದೆ ಎಂದು ಮೂಲಗಳು ಹೇಳಿವೆ.
ಶುಕ್ರವಾರ ಕಂಪನಿಯ ಉನ್ನತ ಮಟ್ಟದ ಹೂಡಿಕೆದಾರರ ಮಹತ್ವದ ಸಭೆ ನಡೆಯಲಿದ್ದು, ಕೆಲ ಹೂಡಿಕೆದಾರರು ರವೀಂದ್ರನ್ ಅವರನ್ನು ಸ್ಥಾನದಿಂದ ತೆರವುಗೊಳಿಸಲಿಚ್ಛಿಸಿದ್ದಾರೆ ಎಂದು ವರದಿಯಾಗಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಪ್ರಕರಣ ಕುರಿತಂತೆ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶ ಹೊರಿಡಿಸಿದ್ದು, ‘ಅಂತಿಮ ವಿಚಾರಣೆಯವರೆಗೂ ಹೂಡಿಕೆದಾರರು ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳದಂತೆ’ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಮಾರ್ಚ್ 13ರಂದು ನಡೆಯಲಿದೆ.
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ರವೀಂದ್ರನ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಇದೇ ಪ್ರಕರಣದಲ್ಲಿ ₹9 ಸಾವಿರ ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2023ರ ನವೆಂಬರ್‌ನಲ್ಲಿ ರವೀಂದ್ರನ್ ಅವರಿಗೆ ಇ.ಡಿ. ಕಾರಣ ಕೇಳಿ ನೋಟಿಸ್ ನೀಡಿತ್ತು.
ಥಿಂಕ್ ಅಂಡ್ ಲರ್ನ್ ಕಂಪನಿ ಹಾಗೂ ಇತರ ವ್ಯವಹಾರ ನಡೆಸುವ ಕಂಪನಿಯು ವಿದೇಶಿ ಹೂಡಿಕೆ ಪಡೆದ ಕುರಿತು ಸಲ್ಲಿಕೆಯಾದ ಹಲವಾರು ದೂರುಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.