ನವದೆಹಲಿ, ಮುಂಬೈ ಹಾಗೂ ಲಖನೌದಲ್ಲಿ ಎಜೆಎಲ್‌ಗೆ ಸೇರಿದ ಕಟ್ಟಡಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನೋಟಿಸ್ ಅಂಟಿಸಿದೆ
–ಪಿಟಿಐ ಚಿತ್ರ
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಗೆ ಸೇರಿದ ₹661 ಕೋಟಿ ಮೌಲ್ಯದ ಆಸ್ತಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ.) ನೋಟಿಸ್ ಜಾರಿಗೊಳಿಸಿದೆ.
ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್ (5ಎ ಬಹಾದ್ದೂರ್ ಶಾ ಜಫಾರ್ ಮಾರ್ಗ), ಮುಂಬೈನ ಪೂರ್ವ ಬಾಂದ್ರಾದಲ್ಲಿರುವ ಕಟ್ಟಡ (ಫ್ಲಾಟ್ ನಂ.2, ಸರ್ವೇ ನಂ.341) ಹಾಗೂ ಲಖನೌದ ಬಿಶ್ವೇಶ್ವರನಾಥ್ ರಸ್ತೆಯಲ್ಲಿರುವ ಕಟ್ಟಡದ (ಆಸ್ತಿ ಸಂಖ್ಯೆ 01) ಮೇಲೆ ಶುಕ್ರವಾರ ನೋಟಿಸ್ ಅಂಟಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯು ತಿಳಿಸಿದೆ. ಆವರಣವನ್ನು ತಕ್ಷಣವೇ ಖಾಲಿ ಮಾಡುವಂತೆ ಅಥವಾ ಬಾಡಿಗೆ ವರ್ಗಾಯಿಸುವಂತೆ (ಮುಂಬೈ ಆಸ್ತಿಗೆ ಸಂಬಂಧಿಸಿದಂತೆ) ಇ.ಡಿ. ಸೂಚನೆ ನೀಡಿದೆ.
ಪೂರ್ವ ಬಾಂದ್ರಾದಲ್ಲಿರುವ ಹೆರಾಲ್ಡ್ ಹೌಸ್‌ನ 7, 8, 9ನೇ ಮಹಡಿಯಲ್ಲಿ ಜಿಂದಾಲ್ ಸೌತ್‌ವೆಸ್ಟ್ ಪ್ರಾಜೆಕ್ಟ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಗೆ ಪಾವತಿಸುತ್ತಿದ್ದ ಬಾಡಿಗೆ/ ಗುತ್ತಿಗೆ ಹಣವನ್ನು ಪ್ರತಿ ತಿಂಗಳು ಇ.ಡಿ. ನಿರ್ದೇಶಕರ ಹೆಸರಿಗೆ ಪಾವತಿ ಮಾಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್ (8) ಹಾಗೂ ನಿಯಮ 5(1)ರ ಅಡಿಯಲ್ಲಿ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ. 2023ರ ನವೆಂಬರ್ ತಿಂಗಳಲ್ಲಿ ಈ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು.
ಪ್ರಕರಣವೇನು: ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದ ಮೇಲೆ ಎಜೆಎಲ್ ಹಾಗೂ ಯಂಗ್ ಇಂಡಿಯನ್ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು.
‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಎಜೆಎಲ್ ಪ್ರಕಟಿಸುತ್ತಿದ್ದು, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಎಜೆಎಲ್ ಸಂಸ್ಥೆಯು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ, ವೆಬ್ ಪೋರ್ಟಲ್ ನಡೆಸುತ್ತಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ಶೇಕಡಾ 38ರಷ್ಟು ಪಾಲು ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಇಬ್ಬರನ್ನೂ ಇ.ಡಿ. ಅಧಿಕಾರಿಗಳು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದರು.
‘ಯಂಗ್ ಇಂಡಿಯನ್, ಎಜೆಎಲ್ ಪ್ರಾಪರ್ಟಿಸ್ ಸಂಸ್ಥೆಗಳು ಬೋಗಸ್ ದೇಣಿಗೆಯ ರೂಪದಲ್ಲಿ ₹18 ಕೋಟಿ, ಬೋಗಸ್ ಮುಂಗಡ ಬಾಡಿಗೆಯಾಗಿ ₹38 ಕೋಟಿ ಹಾಗೂ ಬೋಗಸ್ ಜಾಹೀರಾತು ₹38 ಕೋಟಿಯನ್ನು ಪಡೆದಿವೆ’ ಎಂದು ಇ.ಡಿ ಆರೋಪಿಸಿದೆ.
ಸುಬ್ರಹ್ಮಣ್ಯ ಸ್ವಾಮಿ ದೂರು: 2014ರ ಜೂನ್ 26ರಂದು, ಆಗಿನ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರು ಖಾಸಗಿ ದೂರು ದಾಖಲಿಸಿದ್ದರು. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ದೂರು ಪುರಸ್ಕರಿಸಿದ ಬಳಿಕ 2021ರಂದು ಜಾರಿ ನಿರ್ದೇಶನಾಲಯವು ತನಿಖೆ ಆರಂಭಿಸಿತ್ತು.
‘ತನಿಖಾ ಪ್ರಕ್ರಿಯೆಯನ್ನು ಆರೋಪಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದೆಹಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ತನಿಖಾ ಪ್ರಕ್ರಿಯೆಯು ಸಮರ್ಪಕವಾಗಿದೆ ಎಂದು ಸ್ಪಷ್ಟಪಡಿಸಿದ ಬಳಿಕ ಪ್ರಕ್ರಿಯೆ ಮುಂದುವರಿದಿತ್ತು’ ಎಂದು ಇ.ಡಿ ತಿಳಿಸಿತ್ತು.
‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಒಡೆತನದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಎಜೆಎಲ್ ಪ್ರಾಪರ್ಟಿಸ್‌ಗೆ ಸೇರಿದ ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ ₹50 ಲಕ್ಷಕ್ಕೆ ಸ್ವಾಧೀನಪಡಿಸಿಕೊಂಡಿರುವುದು ತನಿಖೆಯ ವೇಳೆ ‘ನಿರ್ಣಾಯಕ’ವಾಗಿ ಕಂಡುಬಂದಿದೆ. ಸ್ವಾಧೀನ ಪ್ರಕ್ರಿಯೆ ವೇಳೆ ಆಸ್ತಿ ಮೌಲ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ’ ಎಂದು ಇ.ಡಿ ಪ್ರತಿಪಾದಿಸಿತ್ತು.
ದೇಶದ ಸ್ವಾತಂತ್ರ್ಯ ಹೋರಾಟದ ಸಾಂಪ್ರದಾಯಿಕ ಧ್ವನಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಕಾಂಗ್ರೆಸ್ ಪಕ್ಷ ಹಾಗೂ ಪರಂಪರೆ ಜೊತೆಗೆ ಸಂಬಂಧ ಹೊಂದಿರುವ ಕಾರಣ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಲಾಗಿದೆಅಭಿಷೇಕ್ ಮನು ಸಿಂಘ್ವಿ ಕಾಂಗ್ರೆಸ್ ನಾಯಕ (2023ರ ನ.20ರಂದು ನೀಡಿದ್ದ ಹೇಳಿಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.