ರಾಹುಲ್
ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪಕ್ಷದ ನಿಯಂತ್ರಣದಲ್ಲಿರುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಗೆ ಸೇರಿದ ₹661 ಕೋಟಿ ಮೌಲ್ಯದ ಆಸ್ತಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ನೋಟಿಸ್ ಜಾರಿಗೊಳಿಸಿದೆ. ಇದರಿಂದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ.
ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡ ಹಾಗೂ ಲಖನೌದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಕಟ್ಟಡಗಳ ಮೇಲೆ ಶುಕ್ರವಾರ ನೋಟಿಸ್ ಅಂಟಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯು ತಿಳಿಸಿದೆ. ಆವರಣವನ್ನು ತಕ್ಷಣವೇ ಖಾಲಿ ಮಾಡುವಂತೆ ಅಥವಾ ಬಾಡಿಗೆ ವರ್ಗಾಯಿಸುವಂತೆ (ಮುಂಬೈ ಆಸ್ತಿಗೆ ಸಂಬಂಧಿಸಿದಂತೆ) ಇ.ಡಿಗೆ ಸೂಚನೆ ನೀಡಿದೆ.
ಹಣ ಅಕ್ರಮ ವಹಿವಾಟು ತಡೆ ಕಾಯ್ದೆ (ಪಿಎಂಎಲ್‌ಎ) ಸೆಕ್ಷನ್ (8) ಹಾಗೂ ನಿಯಮ 5(1)ರ ಅಡಿಯಲ್ಲಿ ಆಸ್ತಿ ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ. ಎಜೆಎಲ್‌ನ ಆಸ್ತಿ ಮುಟ್ಟುಗೋಲು ಹಾಕಿರುವ ನಿರ್ಧಾರವನ್ನು ಇ.ಡಿ ಖಚಿತಪಡಿಸಿದೆ.
2023ರ ನವೆಂಬರ್ ತಿಂಗಳಲ್ಲಿ ಈ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು.
ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದ ಮೇಲೆ ಎಜೆಎಲ್ ಹಾಗೂ ಯಂಗ್ ಇಂಡಿಯನ್ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಎಜೆಎಲ್ ಪ್ರಕಟಿಸುತ್ತಿದ್ದು, ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ಶೇಕಡಾ 38ರಷ್ಟು ಪಾಲು ಹೊಂದಿದ್ದಾರೆ.
‘ಯಂಗ್ ಇಂಡಿಯನ್, ಎಜೆಎಲ್ ಪ್ರಾಪರ್ಟಿಸ್ ಸಂಸ್ಥೆಗಳು ₹18 ಕೋಟಿ ಬೋಗಸ್ ದೇಣಿಗೆ, ಬೋಗಸ್ ಮುಂಗಡ ಬಾಡಿಗೆಯಾಗಿ ₹38 ಕೋಟಿ ಹಾಗೂ ಬೋಗಸ್ ಜಾಹೀರಾತು ₹38 ಕೋಟಿ ಪಡೆದಿವೆ’ ಎಂದು ಇ.ಡಿ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.