ಇ.ಡಿ
ನವದೆಹಲಿ: ಮನೆ ಖರೀದಿದಾರರ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಇಂದು (ಸೋಮವಾರ) ಜೆಪಿ ಇನ್‌ಫ್ರಾಟೆಕ್ ಲಿಮಿಟೆಡ್ (ಜೆಐಎಲ್), ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (ಜೆಎಎಲ್) ಸೇರಿದಂತೆ ಇತರ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ.
ದಾಳಿ ವೇಳೆ ₹1.70 ಕೋಟಿ ನಗದು ಮತ್ತು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇ 23ರಂದು ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ (ಪಿಎಂಎಲ್‌ಎ) ಜೆಪಿ ಇನ್ಫ್ರಾಟೆಕ್ ಲಿಮಿಟೆಡ್‌ನ (ಜೆಐಎಲ್) ಸಂಬಂಧಿತ ಕಚೇರಿಗಳಿರುವ ದೆಹಲಿ, ನೊಯಿಡಾ, ಗಾಜಿಯಾಬಾದ್ ಮತ್ತು ಮುಂಬೈನ 15 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದ್ದರು.
ಗೌರ್ಸನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗುಲ್ಶನ್ ಹೋಮ್ಜ್ ಪ್ರೈವೇಟ್ ಲಿಮಿಟೆಡ್ ಮತ್ತು ಮಹಾಗುನ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಜೆಎಎಲ್‌ನ ಪ್ರಮುಖ ಪಾಲುದಾರರು ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಜೆಎಎಲ್, ಜೆಐಎಲ್ ನಂತಹ ಕಂಪನಿಗಳು ಮತ್ತು ಅವುಗಳ ನಿರ್ದೇಶಕರ ವಿರುದ್ಧ ದೆಹಲಿ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ದಾಖಲಿಸಿದ ಎಫ್‌ಐಆರ್‌ಗಳನ್ನು ಆಧರಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ಇ.ಡಿ ಹೇಳಿದೆ.
ಜೆಪಿ ವಿಶ್‌ಟೌನ್ (ಜೆಐಎಲ್‌ನ ಯೋಜನೆ) ಮತ್ತು ಜೆಪಿ ಗ್ರೀನ್ಸ್ (ಜೆಎಎಲ್‌ನ ಉದ್ಯಮ) ಯೋಜನೆಗಳಲ್ಲಿ ವಸತಿ ಅಪಾರ್ಟ್‌ಮೆಂಟ್‌ಗಳು ಮತ್ತು ಪ್ಲಾಟ್‌ಗಳ ಹಂಚಿಕೆಯ ನೆಪದಲ್ಲಿ ಹಣವನ್ನು ಹೂಡಿಕೆ ಮಾಡಲು ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ₹12,000 ಕೋಟಿ ವಂಚನೆ ಮಾಡಿರುವ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.