ADVERTISEMENT

ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ: ಇ.ಡಿ ಎಫ್‌ಐಆರ್‌

ಪಿಟಿಐ
Published 10 ಫೆಬ್ರುವರಿ 2026, 14:36 IST
Last Updated 10 ಫೆಬ್ರುವರಿ 2026, 14:36 IST
..
..   

ಅಮರಾವತಿ/ನವದೆಹಲಿ: ತಿರುಮಲ ತಿರುಪತಿ ದೇಗುಲದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಆರೋಪಿಗಳು ಹಣ ಅಕ್ರಮ ವರ್ಗಾವಣೆ ನಡೆಸಿದ್ದಾರೆಯೇ ಮತ್ತು ಕಲಬೆರಕೆ ತುಪ್ಪದ ಮೂಲಕ ಅಕ್ರಮವಾಗಿ ಹಣ ಗಳಿಸಿದ್ದಾರೆಯೇ ಎಂಬ ಬಗ್ಗೆ ಇ.ಡಿಯು ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ(ಪಿಎಂಎಲ್‌ಎ) ಅಡಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಆರೋಪಿಗಳು ಹವಾಲ ವ್ಯವಹಾರದಲ್ಲಿ ತೊಡಗಿದ್ದಾರೆ ಮತ್ತು ಹಣವನ್ನು ಬೇರೆ ಮಾರ್ಗಗಳ ಮೂಲಕ ಬಳಸಿಕೊಳ್ಳುತ್ತಿದ್ದಾರೆ ಎಂಬ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ) ದಾಖಲಿಸಿಕೊಂಡಿರುವ ಎಫ್‌ಐಆರ್‌, ಸಂಗ್ರಹಿಸಿರುವ ದಾಖಲೆ ಮತ್ತು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಇ.ಡಿ ಪರಿಶೀಲಿಸುತ್ತಿದೆ.

ತಿರುಪತಿ ದೇಗುಲದ ಒಂಬತ್ತು ಅಧಿಕಾರಿಗಳು ಸೇರಿದಂತೆ 36 ಮಂದಿಯನ್ನು ಪ್ರಕರಣದ ಆರೋಪಿಗಳು ಎಂದು ಎಸ್‌ಐಟಿ ಪರಿಗಣಿಸಿದೆ. ದೇಗುಲಕ್ಕೆ ತುಪ್ಪದ ರೂಪದಲ್ಲಿ ನೀಡಲಾದ ವಸ್ತುವು ರಾಸಾಯನಿಕ ವಸ್ತುಗಳಿಂದ ತಯಾರಾಗಿತ್ತು ಎಂದು ಎಸ್‌ಐಟಿ ದೃಢಪಡಿಸಿತ್ತು.

ಮಾಜಿ ಮುಖ್ಯಮಂತ್ರಿ ವೈ.ಎಸ್‌ ಜಗನ್‌ಮೋಹನ್‌ ರೆಡ್ಡಿ ಆಡಳಿತ ಅವಧಿಯಲ್ಲಿ ತಿರುಪತಿ ದೇಗುಲದ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು 2024ರ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.