ADVERTISEMENT

‘ಅಗ್ರಿ ಗೋಲ್ಡ್‌’ ವಂಚನೆ: ಸರ್ಕಾರಕ್ಕೆ ಆಸ್ತಿ ಹಿಂದಿರುಗಿಸಿದ ಇ.ಡಿ

ಪಿಟಿಐ
Published 13 ಜೂನ್ 2025, 23:13 IST
Last Updated 13 ಜೂನ್ 2025, 23:13 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ನವದೆಹಲಿ: ‘ಅಗ್ರಿ ಗೋಲ್ಡ್‌’ ಸಂಸ್ಥೆಯು ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಹೂಡಿಕೆದಾರರಿಗೆ ವಂಚಿಸಿರುವ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿಕೊಂಡಿದ್ದ ಆಸ್ತಿಗಳ ಪೈಕಿ ₹611 ಕೋಟಿ ಮೌಲ್ಯದ ಆಸ್ತಿಗಳನ್ನು ಆಂಧ್ರ ಪ್ರದೇಶ ಸರ್ಕಾರದ ಸ್ವಾಧೀನಕ್ಕೆ ನೀಡಿದೆ. ಈ ಆಸ್ತಿಗಳ ಈಗಿನ ಮಾರುಕಟ್ಟೆ ಮೌಲ್ಯ ₹1,000 ಕೋಟಿಗೂ ಹೆಚ್ಚಿದೆ ಎಂದು ಇ.ಡಿ ಶುಕ್ರವಾರ ತಿಳಿಸಿದೆ.

ಅಗ್ರಿ ಗೋಲ್ಡ್‌ ವಂಚನೆಯ ಬಲಿಪಶುಗಳಿಗೆ ಮತ್ತಷ್ಟು ಹಣ ಮರುಪಾವತಿ ಮಾಡಲು ಇದು ನೆರವಾಗಲಿದೆ ಎಂದು ಅದು ಹೇಳಿದೆ.

ಈಗಾಗಲೇ ಜಾರಿ ನಿರ್ದೇಶನಾಲಯವು ಫೆಬ್ರುವರಿಯಲ್ಲಿ ₹3,339 ಕೋಟಿ ಮೌಲ್ಯದ ಆಸ್ತಿಗಳನ್ನು (ಈಗಿನ ಮಾರುಕಟ್ಟೆ ಮೌಲ್ಯ ₹6,000 ಕೋಟಿಗೂ ಹೆಚ್ಚಿದೆ) ಸರ್ಕಾರಕ್ಕೆ ಹಿಂದಿರುಗಿಸಿತ್ತು ಎಂದು ಅದು ತಿಳಿಸಿದೆ.  

ADVERTISEMENT

ಈ ಮೂಲಕ ಒಟ್ಟಾರೆ ₹7,000 ಕೋಟಿ ಮೌಲ್ಯದ ಆಸ್ತಿಯನ್ನು ಆಂಧ್ರ ಸರ್ಕಾರಕ್ಕೆ ಹಿಂದಿರುಗಿಸುವ ಪ್ರಕ್ರಿಯೆಯ ಅಂತಿಮ ಹಂತ ಸಾಧಿಸಿದಂತಾಗಿದೆ ಎಂದು ಅದು ಪ್ರಕಟಣೆಯಲ್ಲಿ ವಿವರಿಸಿದೆ.

ಅತ್ಯಧಿಕ ಆದಾಯ ಅಥವಾ ವಸತಿ ಪ್ಲಾಟ್‌ ನೀಡುವ ಭರವಸೆಯೊಂದಿಗೆ ‘ಅಗ್ರಿ ಗೋಲ್ಡ್‌’ ಸಮೂಹದ ಕಂಪನಿಗಳು ಜನರಿಂದ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆಗಳನ್ನು ಮಾಡಿಸಿತ್ತು. ಹೀಗೆ ಸುಮಾರು 19 ಲಕ್ಷ ಗ್ರಾಹಕರಿಂದ (32 ಲಕ್ಷ ಖಾತೆದಾರರು) ಠೇವಣಿಗಳನ್ನು ಸಂಗ್ರಹಿಸಿದೆ ಎಂದು ಆರೋಪಿಸಲಾಗಿದೆ ಎಂದು ಇ.ಡಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.