ADVERTISEMENT

ದೆಹಲಿ ಅಬಕಾರಿ ಹಗರಣ: ಕರ್ನಾಟಕ ಸೇರಿ ಹಲವೆಡೆ ಇ.ಡಿ ಶೋಧ

ಪಿಟಿಐ
Published 6 ಸೆಪ್ಟೆಂಬರ್ 2022, 12:52 IST
Last Updated 6 ಸೆಪ್ಟೆಂಬರ್ 2022, 12:52 IST
ಇ.ಡಿ
ಇ.ಡಿ   

ನವದೆಹಲಿ (ಪಿಟಿಐ): ‘ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕರ್ನಾಟಕ ಸೇರಿ ಇತರ ರಾಜ್ಯಗಳ ಸುಮಾರು 40 ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದೆಹಲಿ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಹರಿಯಾಣ, ಉತ್ತರ ಪ್ರದೇಶ ಹಾಗೂ ಕರ್ನಾಟಕದ 38 ರಿಂದ 49 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಹಗರಣದಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಕೆಲ ಸರ್ಕಾರಿ ಅಧಿಕಾರಿಗಳ ಹೆಸರು ಕೇಳಿಬಂದಿದ್ದು ಅವರಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.

‘ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ಸೇರಿದ ಯಾವುದೇ ಸ್ಥಳಗಳಲ್ಲಿಯೂ ಶೋಧ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಅದರಲ್ಲಿ ಸಿಸೋಡಿಯಾ ಸೇರಿ ಒಟ್ಟು 14 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಅಂಶಗಳ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್‌ ಸೆಕ್ಷನ್‌ನಡಿ ತನಿಖೆ ನಡೆಸುತ್ತಿದೆ.

‘ಅಬಕಾರಿ ನೀತಿ ಜಾರಿಗೊಳಿಸುವಿಕೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳು ಮತ್ತು ಕಂಪನಿಗಳು ಪಿಎಂಎಲ್‌ಎ ಕಾಯ್ದೆ ಉಲ್ಲಂಘಿಸಿರುವ, ಅಕ್ರಮ ಅಥವಾ ಬೇನಾಮಿ ಆಸ್ತಿ ಸೃಷ್ಟಿಯ ಸಂಭವನೀಯತೆಯ ಬಗ್ಗೆ ಇ.ಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಹಗರಣದ ಸಂಬಂಧ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಹಾಗೂ ಐಎಎಸ್‌ ಅಧಿಕಾರಿ ಆರವ ಗೋಪಿ ಕೃಷ್ಣ ಅವರ ದೆಹಲಿ ನಿವಾಸ ಮತ್ತು ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಇತರೆ 19 ಸ್ಥಳಗಳ ಮೇಲೆ ಆಗಸ್ಟ್‌ 19ರಂದು ದಾಳಿ ನಡೆಸಿದ್ದರು.

ಬಿಜೆಪಿಯಿಂದ ಸಹಿ ಸಂಗ್ರಹ ಅಭಿಯಾನ
ಮನೀಷ್‌ ಸಿಸೋಡಿಯಾ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿರುವ ಬಿಜೆಪಿ, ತನ್ನ ಈ ಒತ್ತಾಯಕ್ಕೆ ಜನ ಬೆಂಬಲ ಕೋರುವ ಉದ್ದೇಶದಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಅದೇಶ್‌ ಗುಪ್ತಾ, ಸಂಸದರಾದ ಮನೋಜ್‌ ತಿವಾರಿ ಮತ್ತು ರಮೇಶ್‌ ಬಿಧುರಿ ಸೇರಿದಂತೆ ಇತರರು ಮಂಗಳವಾರ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ನಗರದ 20 ಮೆಟ್ರೊ ನಿಲ್ದಾಣ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಸಹಿ ಸಂಗ್ರಹ ನಡೆಸಲಾಯಿತು.

‘ಸಿಸೋಡಿಯಾಗೆ ಕ್ಲೀನ್‌ ಚಿಟ್‌ ನೀಡಿದ ಇ.ಡಿ’
‘ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇ.ಡಿ ಕೂಡ ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ‘ಕ್ಲೀನ್‌ ಚಿಟ್‌’ ನೀಡಿದೆ. ಒಂದೊಮ್ಮೆ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದಿದ್ದರೆ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದರು’ ಎಂದು ಆಮ್‌ ಆದ್ಮಿ ಪಕ್ಷ ಮಂಗಳವಾರ ಹೇಳಿದೆ.

‘ಸಿಸೋಡಿಯಾ ಅವರಿಗೆ ಈ ಮೊದಲು ಸಿಬಿಐ ಕ್ಲೀನ್‌ ಚಿಟ್‌ ನೀಡಿತ್ತು’ ಎಂದು ತಿಳಿಸಿದೆ.

*
ಮುಚ್ಚಿಡುವುದಕ್ಕೆ ಏನೂ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಒಂದೊಮ್ಮೆ ಇ.ಡಿ ಅಧಿಕಾರಿಗಳು ನನ್ನ ಸ್ಥಳಕ್ಕೆ ಬಂದರೆ ಅವರಿಗೆ ಕೆಲ ಶಾಲೆಗಳ ನಕಾಶೆ ಸಿಗಬಹುದಷ್ಟೆ.
– ಮನೀಷ್‌ ಸಿಸೋಡಿಯಾ, ದೆಹಲಿ ಉಪ ಮುಖ್ಯಮಂತ್ರಿ

*
ಇ.ಡಿ ಕೂಡಾ ಸಿಸೋಡಿಯಾಗೆ ಕ್ಲೀನ್‌ ಚಿಟ್‌ ನೀಡಿದೆ. ಇದು ಪಕ್ಷಕ್ಕೆ ಸಂತಸ ತಂದಿದೆ. ಸಿಸೋಡಿಯಾ ಮನೆಯಲ್ಲಿ ಏನೂ ಸಿಗುವುದಿಲ್ಲ ಎಂಬುದು ಇ.ಡಿ ಅಧಿಕಾರಿಗಳಿಗೆ ಗೊತ್ತು. ಹೀಗಾಗಿ ಅವರ ನಿವಾಸ ಬಿಟ್ಟು ದೇಶದ ಇತರೆಡೆ ಶೋಧ ನಡೆಸಿದ್ದಾರೆ
–ಸೌರಭ್‌ ಭಾರದ್ವಾಜ್‌, ಎಎಪಿಯ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.