ADVERTISEMENT

ಕೊಲೆ ಪ್ರಕರಣ: ಇಬ್ಬರು ಮಲಯಾಳಿಗಳಿಗೆ ಮರಣದಂಡನೆ ವಿಧಿಸಿದ ಯುಎಇ

ಇಬ್ಬರನ್ನು ಉಳಿಸಲು ಎನ್‌ಆರ್‌ಐಗಳು ಮಾಡಿದ ಹೋರಾಟ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 14:23 IST
Last Updated 6 ಮಾರ್ಚ್ 2025, 14:23 IST
<div class="paragraphs"><p>ಮರಣದಂಡನೆ</p></div>

ಮರಣದಂಡನೆ

   

(ಐಸ್ಟೋಕ್ ಚಿತ್ರ)

ತಿರುವನಂತಪುರ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಮರಣದಂಡನೆಗೆ ಗುರಿಯಾಗಿದ್ದ  ಇಬ್ಬರು ಮಲಯಾಳಿಗಳನ್ನು ರಕ್ಷಿಸಲು ಇಲ್ಲಿನ ಅನಿವಾಸಿ ಭಾರತೀಯರು ನಡೆಸಿದ ಹೋರಾಟ ವ್ಯರ್ಥವಾಗಿದೆ. 

ADVERTISEMENT

ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಹತ್ಯೆಗೈದ ಆರೋಪದ ಮೇಲೆ ಕಾಸರಗೋಡು ಜಿಲ್ಲೆಯ ಚೀಮೇನಿಯ ಪೊಡವೂರ್‌ ನಿವಾಸಿ ಮುರಳೀಧರನ್‌ (43) ಹಾಗೂ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ಕುನ್ನೋತ್ತ್‌ನ ಮೊಹಮ್ಮದ್‌ ರೀನಶ್‌ (28) ಅವರಿಗೆ ಗುರುವಾರ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

 ಮುರಳೀಧರನ್‌ಗೆ ತಂದೆ ಕೇಶವನ್‌, ತಾಯಿ ಜಾನಕಿ, ಕಿರಿ ಸಹೋದರ ಮುಕೇಶ್‌ ಇದ್ದಾರೆ. ಕಿರಿಯ ಸಹೋದರಿಗೆ ಮದುವೆಯಾಗಿದೆ. ಅವರ ಅಂತಿಮ ಸಂಸ್ಕಾರ ನಡೆಸಲು ಯುಎಇಗೆ ಹೋಗುವ ಯಾವುದೇ ಆಲೋಚನೆಯಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

2006ರಲ್ಲಿ ಮುರಳೀಧರನ್‌ ಅವರು ಕೆಲಸಕ್ಕಾಗಿ ಯುಎಇಗೆ ತೆರಳಿದ್ದರು. ಇದಾದ ಬಳಿಕ ಒಂದು ಬಾರಿಯೂ ಕೂಡ ಮನೆಗೆ ಬಂದಿರಲಿಲ್ಲ. 2009ರಲ್ಲಿ ಮಲಪ್ಪುಂನ ತಿರೂರ್‌ನ ನಿವಾಸಿಯೊಬ್ಬರನ್ನು ಕೊಂದ ಆರೋಪದ ಮೇಲೆ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿತ್ತು.

ಈ ವೇಳೆ ವಿದೇಶದಲ್ಲಿದ್ದ ಅವರ ತಂದೆ ಜೈಲಿನಲ್ಲಿದ್ದ ಮಗನನ್ನು ಭೇಟಿಯಾಗಿದ್ದರು. ಇದಾದ ಬಳಿಕ ಆತನನ್ನು ಜೈಲಿನಿಂದ ಹೊರತರಲು ಯತ್ನಿಸಿದ್ದರು. ನಂತರ ಅನಿವಾಸಿ ಭಾರತೀಯರನ್ನು ಭೇಟಿಯಾಗಿದ್ದರು. ಕಾನೂನು ಹೋರಾಟಕ್ಕಾಗಿ, ಒಂದಿಷ್ಟು ಆಸ್ತಿಯನ್ನು ಮಾರಾಟ ಮಾಡಿದ್ದರು. 

‘2009ರಿಂದಲೂ ಬದುಕಿಸಲು ಪ್ರಯತ್ನ ನಡೆಸಿದ್ದೆನು. ಕೇರಳ ಸರ್ಕಾರದ ನೆರವು ಕೋರಿದ್ದೆನು. ಕೆಲವು ದಿನಗಳ ಹಿಂದೆ ಕರೆಮಾಡಿದ್ದ ಆತನೇ ಗಲ್ಲುಶಿಕ್ಷೆ ಜಾರಿಯಾಗುವ ಕುರಿತು ತಿಳಿಸಿದ್ದ’ ಎಂದು ಕೇಶವನ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

‘ಆತನ ಸಾವಿನ ಸುದ್ದಿ ಖಚಿತವಾದ ಕುಟುಂಬ ಆಘಾತಕ್ಕೊಳಗಾಗಿದೆ. ಯಾರ ಜೊತೆಗೆ ಮಾತನಾಡುವ ಸ್ಥಿತಿಯಲ್ಲಿಲ್ಲ’ ಎಂದು ಸ್ಥಳೀಯ ಪಂಚಾಯಿತಿ ಸದಸ್ಯೆ ಶೋಭಾನಾ ತಿಳಿಸಿದರು.

 2023ರ ಫೆಬ್ರುವರಿ ತಿಂಗಳಲ್ಲಿ ಯುಎಇ ನಿವಾಸಿಗೆ ಚೂರಿ ಇರಿದು ಹತ್ಯೆ ಮಾಡಿದ ಆರೋಪದಲ್ಲಿ ಕಣ್ಣೂರು ಜಿಲ್ಲೆಯ ತಲಶ್ಶೇರಿಯ ರೀನಶ್‌ ಕೂಡ ಮರಣದಂಡನೆ ಗುರಿಯಾಗಿದ್ದರು. ರೀನಶ್‌ ಅವರನ್ನು ಶಿಕ್ಷೆಯಿಂದ ಪಾರು ಮಾಡಲು ಕುಟುಂಬದ ಸದಸ್ಯರು ನಡೆಸಿದ ಪ್ರಯತ್ನಗಳು ಸಹ ವಿಫಲವಾಗಿವೆ.

‘ಮೃತದೇಹ ತರಲು ಕ್ರಮ ವಹಿಸಿ’

ತಿರುವನಂತಪುರಂ: ‘ಜೋರ್ಡಾನ್‌ನಲ್ಲಿ ಗುಂಡಿನ ದಾಳಿಗೆ ಒಳಗಾದ ವ್ಯಕ್ತಿಯ ಮೃತದೇಹವನ್ನು ಸರ್ಕಾರದ ವೆಚ್ಚದಲ್ಲಿ ತರಲು ಕ್ರಮವಹಿಸಬೇಕು’ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌ ಅವರು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಇಲ್ಲಿನ ತುಂಬಾ ಪ್ರದೇಶದ ನಿವಾಸಿ ಅನಿ ಥಾಮಸ್‌ ಗ್ಯಾಬ್ರಿಯಲ್‌ ಅವರು ಫೆಬ್ರುವರಿ 10ರಂದು ಜೋರ್ಡಾನ್‌ ಗಡಿ ದಾಟುತ್ತಿದ್ದ ವೇಳೆ ಅಲ್ಲಿನ ಸೇನೆಯವರು ಹೊಡೆದ ಗುಂಡಿನ ದಾಳಿಗೆ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.