ಭೋಪಾಲ್: ಆಫ್ರಿಕಾ ಖಂಡದ ದಕ್ಷಿಣ ಭಾಗದ ದೇಶ ಬೊಟ್ಸ್‌ವಾನದಿಂದ 8 ಚೀತಾಗಳನ್ನು 2 ಹಂತಗಳಲ್ಲಿ ಭಾರತಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ನಡೆದ ಚೀತಾ ಯೋಜನೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಆಫ್ರಿಕಾ, ಬೊಟ್ಸ್‌ವಾನ ಮತ್ತು ಕೀನ್ಯಾದಿಂದ ಹೆಚ್ಚಿನ ಚೀತಾಗಳನ್ನು ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ಎರಡು ಹಂತಗಳಲ್ಲಿ 8 ಚೀತಾಗಳನ್ನು ಭಾರತಕ್ಕೆ ತರಲಾಗುವುದು. ಮೇ ತಿಂಗಳೊಳಗೆ ಬೊಟ್ಸ್‌ವಾನದಿಂದ ನಾಲ್ಕು ಚೀತಾಗಳನ್ನು ಭಾರತಕ್ಕೆ ತರುವ ಯೋಜನೆ ಇದೆ. ನಂತರದ ದಿನಗಳಲ್ಲಿ ಇನ್ನೂ ನಾಲ್ಕು ಚೀತಾಗಳನ್ನು ತರಲಾಗುವುದು. ಪ್ರಸ್ತುತ, ಭಾರತ ಮತ್ತು ಕೀನ್ಯಾ ನಡುವಿನ ಒಪ್ಪಂದದ ಕುರಿತು ಮಾತುಕತೆ ಪ್ರಗತಿಯಲ್ಲಿದೆ ಎಂದು ಎನ್‌ಟಿಸಿಎ ಅಧಿಕಾರಿಗಳನ್ನು ಉಲ್ಲೇಖಿಸಿ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಚಿರತೆ ಯೋಜನೆಗೆ ಇದುವರೆಗೆ ₹112 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಎನ್‌ಟಿಸಿಎ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಶೇ 67ರಷ್ಟು ಹಣ ಮಧ್ಯಪ್ರದೇಶದಲ್ಲಿ ಚೀತಾಗಳ ಪುನರ್ವಸತಿಗೆ ನೀಡಲಾಗಿದೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 26 ಚೀತಾಗಳಿವೆ ಎಂದು ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಜ್ವಾಲಾ, ಆಶಾ, ಗಾಮಿನಿ ಮತ್ತು ವೀರಾ ಎಂಬ ಚೀತಾಗಳು ಮರಿಗಳಿಗೆ ಜನ್ಮ ನೀಡಿವೆ. ಎರಡು ವರ್ಷಗಳಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅವರು ಹೇಳಿದ್ದಾರೆ.
ಆಫ್ರಿಕಾ ಖಂಡದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಯ ಭಾಗವಾಗಿ 2022ರ ಸೆಪ್ಟೆಂಬರ್‌ನಲ್ಲಿ ಮೊದಲ ತಂಡದಲ್ಲಿ ನಮೀಬಿಯಾದಿಂದ 8, 2023ರ ಫೆಬ್ರುವರಿಯಲ್ಲಿ ಎರಡನೇ ತಂಡದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 26 ಚೀತಾಗಳಿದ್ದು, ಅವುಗಳಲ್ಲಿ 14 ಮರಿಗಳು ಭಾರತದಲ್ಲಿ ಜನಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.