ADVERTISEMENT

ಧಾರಾಕಾರ ಮಳೆ: ಉತ್ತರ ಪ್ರದೇಶದಲ್ಲಿ 18 ಮಂದಿ ಸಾವು

ಪಿಟಿಐ
Published 19 ಜುಲೈ 2025, 15:38 IST
Last Updated 19 ಜುಲೈ 2025, 15:38 IST
<div class="paragraphs"><p>ಬಿಹಾರದಲ್ಲಿ ವ್ಯಾಪಕ ಮಳೆಯಾಗಿದ್ದು, ಪಾಟ್ನಾದ ದುರ್ಜಾ ದಯಾರಾ ಪ್ರದೇಶದ ಗಂಗಾ ನದಿಯು ಉಕ್ಕಿ ಹರಿದ ದೃಶ್ಯ</p></div>

ಬಿಹಾರದಲ್ಲಿ ವ್ಯಾಪಕ ಮಳೆಯಾಗಿದ್ದು, ಪಾಟ್ನಾದ ದುರ್ಜಾ ದಯಾರಾ ಪ್ರದೇಶದ ಗಂಗಾ ನದಿಯು ಉಕ್ಕಿ ಹರಿದ ದೃಶ್ಯ

   

–ಪಿಟಿಐ ಚಿತ್ರ

ನವದೆಹಲಿ: ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಅನಾಹುತಗಳಿಂದ ಎರಡು ದಿನಗಳಲ್ಲಿ 18 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಕೇರಳ, ಉತ್ತರಾಖಂಡ, ಹಿಮಾಚಲಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಎಚ್ಚರಿಕೆ ನೀಡಿದೆ.

ರಾಜಸ್ಥಾನದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಪ‍್ರವಾಹ ಪರಿಸ್ಥಿತಿ ತಲೆದೋರಿದೆ. ಅರುಣಾಚಲಪ್ರದೇಶ ಹಾಗೂ ಸಿಕ್ಕಿಂನಲ್ಲಿ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಜುಲೈ 18ರಿಂದ 19ರವರೆಗೆ ಉತ್ತರಪ್ರದೇಶದಲ್ಲಿ ಮಳೆಯಿಂದ ಸಂಭವಿಸಿದ ಅನಾಹುತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 8 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಬ್ಬರು ಹಾವು ಕಚ್ಚಿ ಸತ್ತಿದ್ದಾರೆ.

ನಿರಂತರ ಮಳೆಯಿಂದ ರಾಜಸ್ಥಾನದ ಅಜ್ಮೇರ್‌, ಪುಷ್ಕರ್‌, ಬುಂಡಿ, ಸವಾಯಿ ಮಾಧೋಪುರ ಹಾಗೂ ಪಾಲಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಅಜ್ಮೇರ್‌ ದರ್ಗಾದ ಸುತ್ತಲೂ ನೀರು ತುಂಬಿದ್ದು, ಹಲವಾರು ಮಂದಿ ನೀರಿನಲ್ಲಿ ಕೊಚ್ಚಿಹೋಗುವ ವೇಳೆ ಸ್ಥಳೀಯರು ರಕ್ಷಿಸಿದರು.

ಜುಲೈ 27ರಿಂದ 28ರವರೆಗೆ ರಾಜಸ್ಥಾನದ ಪೂರ್ವ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಉತ್ತರಾಖಂಡದ ಕುಮಾಂವ್‌ ಭಾಗದಲ್ಲಿ ಭಾನುವಾರದವರೆಗೂ ಧಾರಾಕಾರ ಮಳೆಯಾಗಲಿದ್ದು, ‘ರೆಡ್‌ ಅಲರ್ಟ್’ ಘೋಷಿಸಲಾಗಿದೆ.

ಗಂಗಾ ನದಿಯು ಉಕ್ಕಿ ಹರಿಯುತ್ತಿದ್ದು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಮುಳುಗಡೆಯಾದ ಮಣಿಕರ್ಣಿಕಾ ಘಾಟ್‌ನಲ್ಲಿ ಶವವನ್ನು ಹೊತ್ತೊಯ್ದ ದೃಶ್ಯ

ಮಳೆ ಕಾರಣದಿಂದ ಹಿಮಾಲಯದ ಮೇಲ್ಭಾಗದ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ರಸ್ತೆಗಳು ಬಂದ್‌: ಹಿಮಾಚಲ ಪ್ರದೇಶದ ಬಿಲಾಸ್‌ಪುರ್, ಹಮೀರ್‌ಪುರ್‌, ಕಾಂಗ್ರಾ, ಕುಲ್ಲು, ಮಂಡಿ, ಶಿಮ್ಲಾ ಹಾಗೂ ಸೋಲಾನ್‌ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೂ ವ್ಯಾಪಕ ಮಳೆಯಾಗುತ್ತಿದೆ. 

‘ಮಳೆ ಅನಾಹುತದಿಂದ ರಾಜ್ಯದಲ್ಲಿ 141 ರಸ್ತೆಗಳು ಮುಚ್ಚಿದ್ದು, 58 ನೀರು ಪೂರೈಕೆ ಯೋಜನೆ ಹಾಗೂ 28 ವಿದ್ಯುತ್‌ ವಿತರಣಾ ಘಟಕಗಳಿಗೆ ತೀವ್ರ ಹಾನಿಯುಂಟಾಗಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.